ನವದೆಹಲಿ: ಕರ್ನಾಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ನಿರಾಕರಿಸಿದ ಕೇಂದ್ರದ ಕ್ರಮವನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ಅವರು ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಧಾನ್ಯದ ಬೆಲೆ ಹೆಚ್ಚಾಗದಂತೆ ನೋಡಿಕೊಳ್ಳಲು ಮತ್ತು ಜನರು ಅದನ್ನು ಕೈಗೆಟುಕುವ ದರದಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ತನ್ನ ದಾಸ್ತಾನುಗಳಿಂದ ಹಲವಾರು ರಾಜ್ಯಗಳಿಗೆ ಅಕ್ಕಿ ನೀಡಲು ನಿರಾಕರಿಸಿದೆ ಎಂದು ಗೋಯಲ್ ತಿಳಿಸಿದ್ದಾರೆ.
ಕರ್ನಾಟ ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿದ್ದು, ಈ ಕುರಿತು ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೋಯಲ್ ಅವರು, ದೇಶದ 140 ಕೋಟಿ ಜನರಿಗೆ ನೀಡಲು ಅಕ್ಕಿ ದಾಸ್ತಾನು ಮಾಡಲು ಕಾರ್ಯದರ್ಶಿಗಳ ಸಮಿತಿ ನಿರ್ಧರಿಸಿದೆ. ರಾಜ್ಯಗಳು ಅಗತ್ಯಬಿದ್ದರೆ ಮಾರುಕಟ್ಟೆಯಿಂದ ಅಕ್ಕಿಯನ್ನು ಖರೀದಿಸಬಹುದು ಎಂದು ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) ಅಡಿಯಲ್ಲಿ ಕೇಂದ್ರದ ಸಂಗ್ರಹದಿಂದ ಅಕ್ಕಿ ಮತ್ತು ಗೋಧಿ ಮಾರಾಟವನ್ನು ನಿಲ್ಲಿಸಿದೆ. ಇದೇ ವೇಳೆ ಕರ್ನಾಟಕ ಅಕ್ಕಿ ಕೇಳಿರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಿವಾದ ಸೃಷ್ಟಿಸಿದೆ.