ಮಂಜೇಶ್ವರ: ಕೇರಳದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಜಮೀನು ಇರುವುದು ಸರ್ಕಾರದ ಗುರಿಯಾಗಿದ್ದು, ರಾಜ್ಯದಲ್ಲಿ ಭೂಮಿಯ ಡಿಜಿಟಲ್ ಮರು ಸಮೀಕ್ಷೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕಂದಾಯ, ವಸತಿ ಸಚಿವ ಕೆ.ರಾಜನ್ ತಿಳಿಸಿದರು.
ಮಂಜೇಶ್ವರ ತಾಲೂಕಿನ ಕಡಂಬಾರ್ ಮತ್ತು ಮೀಂಜ ಸ್ಮಾರ್ಟ್ ಗ್ರಾಮ ಕಛೇರಿಗಳನ್ನು ಶುಕ್ರವಾರ ಉದ್ಘಾಟಿಸಿ ಸಚಿವರು ಮಾತನಾಡಿದರು.
ಡಿಜಿಟಲ್ ಮರು ಸಮೀಕ್ಷೆ ನಡೆಸಿದರೆ ಭೂಮಿ ಕಳೆದುಕೊಳ್ಳುವ ಭಯವಿಲ್ಲ. ಎಲ್ಲರಿಗೂ ಮೂಲ ಭೂಮಿ ಸಿಗಲಿದೆ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ವಾಪಸ್ ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಜಿಲ್ಲಾ ಪಂಚಾಯತಿ ಸದಸ್ಯೆ ಕೆ.ಕಮಲಾಕ್ಷಿ, ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಪಜ್ವ, ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲ್, ಪಂಚಾಯತಿ ಸದಸ್ಯ ಕೆ.ಮಿಸ್ರಿಯಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಆರ್.ಜಯಾನಂದ, ಬಿ.ವಿ.ರಾಜನ್, ಪಿ.ಸೋಮಪ್ಪ, ವಹೀದ್ ಕುಡೇಲ್, ಡೇನಿಯಲ್ ಡಿಸೋಜಾ, ಡಾ. ಕೆ.ಎ.ಖಾದರ್, ವಿ.ಡಿ.ಜಯಕುಮಾರ್, ಶಂಕರ ನಾರಾಯಣ ಭಟ್ ಮುಂದಿಲ, ಕಡಂಬಾರ್ ಗ್ರಾ.ಪಂ.ಅಧಿಕಾರಿ ಅಶೋಕ್ ನಾಯ್ಕ್, ಮೀಂಜ ಗ್ರಾಮಾಧಿಕಾರಿ ಕಿರಣ್ ಕುಮಾರ್ ಶೆಟ್ಟಿ ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸ್ವಾಗತಿಸಿ, ಕಾಸರಗೋಡು ಆರ್ ಡಿಒ ಅತುಲ್ ಎಸ್ ನಾಥ್ ವಂದಿಸಿದರು.