ಅಂಬಲಪುಳ: ಹಸುಗಳಲ್ಲಿ ಕ್ಸೈಲೇರಿಯಾ ಎಂಬ ಅಪರೂಪದ ಕಾಯಿಲೆ ಹರಡುತ್ತಿದೆ. ಈ ಬಗ್ಗೆ ಹೈನುಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಆರೋಗ್ಯವಂತ ಹಸುಗಳು ಇದ್ದಕ್ಕಿದ್ದಂತೆ ಸುಸ್ತಾಗುವುದು ಈ ರೋಗದ ಲಕ್ಷಣ.
ಆದರೆ, ಇವು ಬಹುಬೇಗ ಹರಡುತ್ತಿರುವುದೂ ಆತಂಕ ಮೂಡಿಸಿದೆ. ಸೋಂಕಿತ ಹಸುಗಳಿಂದ ಹಾಲಿನ ಇಳುವರಿ ತೀವ್ರವಾಗಿ ಕುಸಿದಿರುವುದರಿಂದ ಹೈನುಗಾರರಿಗೆ ಸಂಕಷ್ಟ ಎದುರಾಗಿದೆ. ಪ್ರತಿದಿನ ಸಿಗುತ್ತಿದ್ದ ಹಾಲಿನ ಪ್ರಮಾಣ ಅರ್ಧಕ್ಕಿಂತ ಕಡಿಮೆ ಇದೆ ಎನ್ನುತ್ತಾರೆ ರೈತರು.
ಕಳೆದ ಮೂರು ತಿಂಗಳ ಹಿಂದೆ ಕೆಲವೆಡೆ ಸಣ್ಣದಾಗಿ ಆರಂಭವಾದ ಕ್ಸೈಲೇರಿಯಾ ರೋಗ ಇದೀಗ ಹಲವೆಡೆ ವ್ಯಾಪಕವಾಗಿ ಹರಡಿದ್ದು, ಪಶು ಸಂರಕ್ಷಣಾ ಇಲಾಖೆ ಹಸುಗಳ ರಕ್ತದ ಮಾದರಿ ಪರೀಕ್ಷೆ ನಡೆಸಿ ಈ ರೋಗ ದೃಢಪಡಿಸಿದೆ. ರೋಗ ಉಲ್ಬಣಗೊಂಡರೆ ಹಸುಗಳು ಕೆಳಗೆ ಬಿದ್ದು ಸಾಯುತ್ತವೆ. ಪಶು ಸಂಗೋಪನಾ ಇಲಾಖೆಯಿಂದ ಸರಿಯಾದ ಔಷಧ ನೀಡಲು ಸಾಧ್ಯವಾಗುತ್ತಿಲ್ಲ, ಹಾಲಿನ ಪ್ರಮಾಣ ಕಡಿಮೆಯಾಗಿ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಹಲವು ಹೈನುಗಾರರು.
ಮೇವಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವುದರಿಂದ ಹಸುಗಳಿಗೆ ಈ ಅಪರೂಪದ ರೋಗ ಕಾಣಿಸಿಕೊಂಡು ಸಂಕಷ್ಟದಲ್ಲಿರುವ ಹೈನುಗಾರರಿಗೆ ಭಾರಿ ಹಿನ್ನಡೆಯಾಗಿದೆ. 50 ಕೆ.ಜಿ ಮೇವಿನ ಬೆಲೆ 35 ರೂಪಾಯಿ ಏರಿಕೆಯಾಗಿ 1,555 ರೂ.ಗೆ ತಲುಪಿದ್ದು, ಒಂದೂವರೆ ತಿಂಗಳಲ್ಲಿ ಈ ಮೇವಿನ ಹೆಚ್ಚಳದ ವೇಳೆಯೇ ರಾಸುಗಳಿಗೆ ಕ್ಸೈಲೇರಿಯಾ ರೋಗ ಹರಡುತ್ತಿದೆ. ಕೋವಿಡ್ ನಂತರ, ಗೊರಸು ರೋಗವು ಹಸುಗಳಲ್ಲಿ ವ್ಯಾಪಕವಾಗಿ ಹರಡಿತು. ಈ ರೋಗದಿಂದ ಹಲವು ಹಸುಗಳು ಸಾವನ್ನಪ್ಪಿದ್ದರಿಂದ ಹೈನುಗಾರಿಕೆ ಕ್ಷೇತ್ರ ನಲುಗಿ ಹೋಗಿತ್ತು. ಈ ನಿಟ್ಟಿನಲ್ಲಿ ಪಶು ಸಂರಕ್ಷಣಾ ಇಲಾಖೆ ಪರಿಣಾಮಕಾರಿ ಮಧ್ಯಸ್ಥಿಕೆ ವಹಿಸಬೇಕು ಎಂಬುದು ಹೈನುಗಾರರ ಆಗ್ರಹವಾಗಿದೆ.