ಭೋಪಾಲ್: ಭಾರತದಲ್ಲಿ ಮುಸ್ಲಿಂ ಸಮುದಾಯದವರು ಹಸುಗಳನ್ನು ಸಾಕಬೇಕು ಹಾಗೂ ತಮ್ಮ ಆಹಾರ ಪದ್ಧತಿಯಲ್ಲಿ ಸಸ್ಯಾಹಾರವನ್ನು ಅಳವಡಿಸಿಕೊಳ್ಳಬೇಕು ಎಂದು ಮಧ್ಯಪ್ರದೇಶದ ಐಎಎಸ್ ಅಧಿಕಾರಿ ನಿಯಾಜ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಮತಾಂತರಗಳ ಕುರಿತೂ ಮಾತನಾಡಿದ್ದಾರೆ. ದೇಶದಲ್ಲಿನ ಮತಾಂತರಗಳಿಗೆ ಬಾಲಿವುಡ್ ಕಾರಣವಾಗಿದೆ. ಸಿನಿಮಾಗಳ ಪ್ರಭಾವದಿಂದಾಗಿ ಮತಾಂತರಗಳು ಹೆಚ್ಚಾಗಿ ನಡೆಯುತ್ತಿವೆ. ಮುಸ್ಲಿಮೇತರರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವಂತೆ ಒತ್ತಾಯಿಸಬಾರದು ಎಂದು ನಿಯಾಜ್ ಖಾನ್ ಹೇಳಿದ್ದಾರೆ.
ಮೊದಲನೆಯದಾಗಿ ಮುಸ್ಲಿಮರ ಹಸುಗಳನ್ನು ಸಾಕಿ ಪಾಲನೆ ಮಾಡಬೇಕು, ಅವುಗಳನ್ನು ರಕ್ಷಿಸಬೇಕು. ಎರಡನೆಯದಾಗಿ ತಮ್ಮ ಆಹಾರ ಪದ್ಧತಿಯಲ್ಲಿ ಸಸ್ಯಾಹಾರವನ್ನು ಅಳವಡಿಸಿಕೊಳ್ಳಬೇಕು. ಮೂರನೆಯದಾಗಿ ಬ್ರಾಹ್ಮಣ ಸಮುದಾಯದ ಜೊತೆ ಮುಸ್ಲಿಮರು ಉತ್ತಮ ಭಾಂದವ್ಯ ಹೊಂದಬೇಕು ಎಂದು ಹೇಳಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲೂ ಇಸ್ಲಾಂ ಮತಾಂತರ, ಸಸ್ಯಾಹಾರದ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಅನೇಕ ಸಂಘಟನೆಗಳು ಇಸ್ಲಾಂ ಧರ್ಮದ ಪ್ರತಿಷ್ಠೆಯನ್ನು ಹಾಳು ಮಾಡಿವೆ ಎಂದು ಹೇಳಿದ್ದಾರೆ.
ಐಎಎಸ್ ಅಧಿಕಾರಿ ನಿಯಾಜ್ ಖಾನ್ ಇಲ್ಲಿಯವರೆಗೂ 9 ಕಾದಂಬರಿಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಅವರು ಬರೆದಿರುವ 'ಬ್ರಾಹ್ಮಿನ್ ದಿ ಗ್ರೇಟ್' ಕಾದಂಬರಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬ್ರಾಹ್ಮಣರಿಗೆ ಸೂಪರ್ ಬ್ರೈನ್ ಇದೆ ಎಂದು ಬರೆದಿದ್ದಾರೆ. ಅವರ ಬೌದ್ಧಿಕ ನಾಯಕತ್ವ ದೇಶದೊಳಗೆ ಸುಧಾರಣೆ ತರಲು ಸಾಧ್ಯ ಎಂದು 'ಬ್ರಾಹ್ಮಿನ್ ದಿ ಗ್ರೇಟ್' ಕಾದಂಬರಿಯಲ್ಲಿ ಹೇಳಿದ್ದಾರೆ.
ಈ ಹಿಂದೆ ಅವರು 'ದಿ ಕಾಶ್ಮೀರ ಫೈಲ್ಸ್' ಚಿತ್ರದ ಕುರಿತಾಗಿ ಟೀಕೆ ವ್ಯಕ್ತಪಡಿಸಿದ್ದರು. ಅವರ ಬಗ್ಗೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಹಿಜಾಬ್ ವಿವಾದದ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಿದ್ದರು.