HEALTH TIPS

ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡುವ ಅಧಿಕಾರ ತನಗಿದೆ: ಸಲಹೆಗಾರರ ಹೆಸರು ಕೈಬಿಡಲು ನಿರಾಕರಿಸಿದ NCERT

              ವದೆಹಲಿ"ಅತಾರ್ಕಿಕ ಹಾಗೂ ದೊಡ್ಡ ಮಟ್ಟದ ಕಡಿತ"ದ ಕಾರಣಕ್ಕೆ ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳಿಂದ ತಮ್ಮ ಹೆಸರು ಕೈಬಿಡುವಂತೆ ಆಕ್ಷೇಪಿಸಿರುವ ಇಬ್ಬರು ಮಾಜಿ ಸಲಹೆಗಾರರ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(NCERT)ಯು, ಹಕ್ಕುಸ್ವಾಮ್ಯದ ಆಧಾರದಲ್ಲಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಅಧಿಕಾರ ತನಗಿದೆ ಎಂದು ಹೇಳಿದ್ದು, ಪಠ್ಯಪುಸ್ತಕಗಳು ಸಾಮೂಹಿಕ ಪ್ರಯತ್ನದ ಫಲವಾಗಿರುವುದರಿಂದ ಯಾವುದೇ ಸದಸ್ಯರು ತಮ್ಮ ಸಹಭಾಗಿತ್ವದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪ್ರತಿಪಾದಿಸಿದೆ ಎಂದು indianexpress.com ವರದಿ ಮಾಡಿದೆ.

           ಮೊದಲಿಗೆ 2006-07ರ ಅವಧಿಯಲ್ಲಿ ಪ್ರಕಟವಾಗಿದ್ದ ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿವರೆಗಿನ ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳ ಮುಖ್ಯ ಸಲಹೆಗಾರರಾಗಿದ್ದ ಸುಹಾಸ್ ಪಾಲ್ಷಿಕರ್ ಹಾಗೂ ಯೋಗೇಂದ್ರ ಯಾದವ್ ಅವರು, ಶುಕ್ರವಾರ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ನಿರ್ದೇಶಕ ಡಿ‌.ಎಸ್.ಸಕ್ಲಾನಿ ಅವರಿಗೆ ಪತ್ರ ಬರೆದು ತಮ್ಮ ಕಳವಳ ವ್ಯಕ್ತಪಡಿಸಿದ್ದರು. ಇತ್ತೀಚಿನ ಪಠ್ಯಪುಸ್ತಕಗಳ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಮಗೆ ಯಾವುದೇ ಶೈಕ್ಷಣಿಕ ಸಮರ್ಥನೆ ಕಂಡು ಬಂದಿಲ್ಲ ಹಾಗೂ ತಿರುಚಿದ ಮತ್ತು ಶೈಕ್ಷಣಿಕವಾಗಿ ನಿಷ್ಕ್ರಿಯವಾಗಿರುವ ಪಠ್ಯಪುಸ್ತಕಗಳಿಂದ ತಮಗೆ ಮುಜುಗರವಾಗಿದೆ ಎಂದು ತಮ್ಮ ಪತ್ರದಲ್ಲಿ ಪ್ರತಿಪಾದಿಸಿದ್ದರು.

            ಈ ಪತ್ರಕ್ಕೆ ಪ್ರತಿಯಾಗಿ ಶುಕ್ರವಾರ ರಾತ್ರಿ ಸಾರ್ವಜನಿಕ ಪ್ರಕಟಣೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು, ಒಮ್ಮೆ ಪಠ್ಯಪುಸ್ತಕಗಳು ಪ್ರಕಟಗೊಂಡ ನಂತರ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಗಳ ಸದಸ್ಯರಾಗಿರುವ ಯಾದವ್ ಮತ್ತು ಪಾಲ್ಷಿಕರ್ ಅದಕ್ಕೆ ಬದ್ಧವಾಗಿರಬೇಕಾಗುತ್ತದೆ ಹಾಗೂ ಶೈಕ್ಷಣಿಕ ಸಾಮಗ್ರಿಗಳ ಹಕ್ಕುಸ್ವಾಮ್ಯವು ಮಂಡಳಿಯ ಸ್ವಾಯತ್ತ ಸಮಿತಿಯ ಬಳಿಯೇ ಉಳಿದಿದೆ. ಅಲ್ಲದೆ ಈ ವ್ಯವಸ್ಥೆಗೆ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಗಳ ಎಲ್ಲ ಸದಸ್ಯರೂ ಲಿಖಿತ ಸಮ್ಮತಿ ನೀಡಿದ್ದಾರೆ ಎಂದೂ ಹೇಳಿದೆ.

              "ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಗಳಲ್ಲಿ ಹಲವು ವಿಧದ ಸಾಮರ್ಥ್ಯದೊಂದಿಗೆ ಇರುವ ಸದಸ್ಯರ ಪಾತ್ರವು ಪಠ್ಯಪುಸ್ತಕಗಳನ್ನು ಹೇಗೆ ವಿನ್ಯಾಸಗೊಳಿಸಬೇಕು ಹಾಗೂ ಅಭಿವೃದ್ಧಿಗೊಳಿಸಬೇಕು ಎಂಬುದರ ಕುರಿತು ಸಲಹೆ ನೀಡಲು ಅಥವಾ ತಮ್ಮ ವಿಷಯಗಳನ್ನು ಅಭಿವೃದ್ಧಿಪಡಿಸಲು ಕೊಡುಗೆ ನೀಡಲಷ್ಟೇ ಸೀಮಿತವೇ ಹೊರತು ಅದರಾಚೆಗೆ ಯಾವ ಅಧಿಕಾರವೂ ಇಲ್ಲ. ಶಾಲಾ ಹಂತದಲ್ಲಿನ ಪಠ್ಯಪುಸ್ತಕಗಳ ಅಭಿವೃದ್ಧಿಯು ನಮ್ಮ ಜ್ಞಾನ ಹಾಗೂ ವಿಷಯ ತಜ್ಞತೆಯನ್ನು ಆಧರಿಸಿದೆ. ಹೀಗಾಗಿ, ಯಾವುದೇ ಹಂತದಲ್ಲಿ ವೈಯಕ್ತಿಕ ಕರ್ತೃತ್ವವನ್ನು ಚಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಸದಸ್ಯನೂ ಸಹಭಾಗಿತ್ವದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದು ತನ್ನ ಪ್ರಕಟಣೆಯಲ್ಲಿ NCERT ಸ್ಪಷ್ಟೀಕರಣ ನೀಡಿದೆ.

               ಪಠ್ಯಪುಸ್ತಕಗಳಲ್ಲಿನ ಸಲಹೆಗಾರರ ಶೈಕ್ಷಣಿಕ ಕೊಡುಗೆಯನ್ನು ಮಾನ್ಯ ಮಾಡಲು ಹಾಗೂ ದಾಖಲೀಕರಣದ ಭಾಗವಾಗಿ ಎಲ್ಲ ಸಲಹೆಗಾರರ ಹೆಸರನ್ನು ಎಲ್ಲ ಪಠ್ಯಪುಸ್ತಕಗಳಲ್ಲಿ ಮುದ್ರಿಸುವುದನ್ನು ಮುಂದುವರಿಸುವುದಾಗಿಯೂ NCERT ಸ್ಪಷ್ಟಪಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries