ನವದೆಹಲಿ (PTI): ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಂಗ ಸಂಸ್ಥೆಯಾಗಿರುವ ರಾಷ್ಟ್ರಸೇವಿಕಾ ಸಂಘದ ಸಂವರ್ಧಿನಿ ನ್ಯಾಸ್ ಘಟಕವು ಇದೇ ಭಾನುವಾರ (ಜೂನ್ 11) 'ಗರ್ಭ ಸಂಸ್ಕಾರ' ಅಭಿಯಾನವನ್ನು ಆರಂಭಿಸಲಿದೆ.
ಗರ್ಭಿಣಿಯರಿಗೆ ಈ ಅಭಿಯಾನದಡಿ ಧಾರ್ಮಿಕ ಗ್ರಂಥಗಳಾದ ಭಗವದ್ಗೀತೆ ಮತ್ತು ರಾಮಾಯಣ ಓದಲು ಪ್ರೋತ್ಸಾಹಿಸಲಾಗುವುದು. ಅಷ್ಟೇ ಅಲ್ಲ, ಸಂಸ್ಕೃತ ಮಂತ್ರಗಳ ಉಚ್ಚಾರ ಹಾಗೂ ಯೋಗಾಭ್ಯಾಸ ಸಹ ಮಾಡಿಸಲಾಗುವುದು. ಇದರಿಂದ ಗರ್ಭಿಣಿಯರಿಗೆ ಸಂಸ್ಕಾರವಂತ ಹಾಗೂ ದೇಶಭಕ್ತ ಮಕ್ಕಳು ಜನಿಸುತ್ತವೆ. ಯೋಗಾಭ್ಯಾಸದಿಂದ ಗರ್ಭಿಣಿಯರಿಗೆ ಸಹಜ ಹೆರಿಗೆ ಆಗಲಿದೆ ಎಂದು ಘಟಕವು ಹೇಳಿದೆ.
ಈ ವರ್ಚುವಲ್ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಿದ್ದು, ತೆಲಂಗಾಣ ರಾಜ್ಯಪಾಲರಾದ ತಮಿಳ್ ಇಸೈ ಸೌಂದರರಾಜನ್ ಮತ್ತು ಇತರ ಗಣ್ಯರು ಉಪಸ್ಥಿತರಿರುತ್ತಾರೆ ಎಂದು ಸಂವರ್ಧಿನಿ ನ್ಯಾಸ್ ಘಟಕವು ತಿಳಿಸಿದೆ.
'ಗರ್ಭಸಂಸ್ಕಾರ ಕಾರ್ಯಕ್ರಮವನ್ನು ಸಮಗ್ರ ಮತ್ತು ವೈಜ್ಞಾನಿಕ ವಿಧಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಗರ್ಭಾವಸ್ಥೆಯಿಂದ ಹೆರಿಗೆಯವರೆಗೆ ಶಿಶುಗಳು ಗರ್ಭದಲ್ಲಿ ಸಂಸ್ಕಾರವನ್ನು (ಸಂಸ್ಕೃತಿ ಮತ್ತು ಮೌಲ್ಯಗಳು) ಕಲಿಯುತ್ತವೆ. ಈ ಕಲಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಪ್ರಕ್ರಿಯೆಯು ಮಗುವಿಗೆ ಎರಡು ವರ್ಷ ಆಗುವವರೆಗೆ ಮುಂದುವರಿಸಲಾಗುವುದು. ಸಂವರ್ಧಿನಿ ನ್ಯಾಸ್ ಜೊತೆಗೆ ಕೆಲಸ ಮಾಡುವ ವೈದ್ಯರು ಈ ಕಾರ್ಯಕ್ರಮವನ್ನು ದೇಶದಾದ್ಯಂತ ಅನುಷ್ಠಾನಗೊಳಿಸುವರು' ಎಂದು ಸಂವರ್ಧಿನಿ ನ್ಯಾಸ್ ಪದಾಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಶನಿವಾರ ತಿಳಿಸಿದ್ದಾರೆ.
'ಸಂಸ್ಕಾರವಂತ ಮಗು ಜನಿಸಲು ಪೌಷ್ಟಿಕ ಆಹಾರ ಸೇವನೆ, ಉತ್ತಮ ವಾತಾವರಣ ಸೇರಿದಂತೆ ವಿವಿಧ ಅಂಶಗಳ ಕುರಿತು ಗರ್ಭಿಣಿಯರು ಮತ್ತು ಅವರ ಕುಟುಂಬಗಳಿಗೆ ಮಾರ್ಗದರ್ಶನ ನೀಡಲಾಗುವುದು' ಎಂದೂ ಅವರು ಹೇಳಿದ್ದಾರೆ.
'ಹುಟ್ಟುವ ಮಗು ಹೆಣ್ಣು ಅಥವಾ ಗಂಡು ಆಗಿರಲಿ, ಅದು ಒಳ್ಳೆಯ ಸಂಸ್ಕಾರ, ಒಳ್ಳೆಯ ಆಲೋಚನೆ ಮತ್ತು ದೇಶಭಕ್ತಿಯನ್ನು ಹೊಂದಿರಬೇಕು. ಜಗತ್ತಿಗೆ ಬರುವ ನಮ್ಮ ಮುಂದಿನ ಪೀಳಿಗೆಯು ಸೇವಾ ಭಾವನೆ, ಮೌಲ್ಯಗಳು ಮತ್ತು ಸಂಸ್ಕೃತಿಯೊಂದಿಗೆ ಬೆಳೆಯಬೇಕು ಹಾಗೂ ಮಹಿಳೆಯರಿಗೆ ಗೌರವ ನೀಡಬೇಕು. ಗರ್ಭಸಂಸ್ಕಾರ ಕಾರ್ಯಕ್ರಮವು ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ' ಎಂದು ಅವರು ತಿಳಿಸಿದ್ದಾರೆ.