ತಿರುವನಂತಪುರಂ: ರಾಜ್ಯ ಸರ್ಕಾರ ಮತ್ತೆ 1000 ಕೋಟಿ ರೂ. ಸಾಲಪಡೆಯಲು ನಿರ್ಧರಿಸಿದೆ. ಇದಕ್ಕಾಗಿ ಹರಾಜು ಪ್ರಕ್ರಿಯೆ ಇದೇ ತಿಂಗಳ 11ರಂದು ರಿಸರ್ವ್ ಬ್ಯಾಂಕ್ ನ ಮುಂಬೈ ಪೋರ್ಟ್ ಕಚೇರಿಯಲ್ಲಿ ನಡೆಯಲಿದೆ.
ಹೆಚ್ಚುವರಿಯಾಗಿ 1000 ಕೋಟಿ ಸಾಲ ಪಡೆದರೆ ಈ ವರ್ಷವೊಂದರಲ್ಲೇ ಸರ್ಕಾರ ಸಾಲಪಡೆದ ಒಟ್ಟುಮೊತ್ತ 9000 ಕೋಟಿ ರೂ.ಗಳಾಗಲಿದೆ.
ಕೇರಳ ಈಗ ಏಪ್ರಿಲ್ ತಿಂಗಳ ಕಲ್ಯಾಣ ಪಿಂಚಣಿ ನೀಡಲು ಸಾಲ ಮಾಡುತ್ತಿದೆ. ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಮತ್ತೆ ಸಾಲ ಮಾಡಲು ಹೊರಟಿದೆ. ಈ ಹಣಕಾಸು ವರ್ಷದಲ್ಲಿ ಕೇರಳ 20,521 ಕೋಟಿ ರೂ.ಸಾಲ ಪಡೆದಿದೆ.
ಸಾಲದ ಮಿತಿಯನ್ನು 28,550 ಕೋಟಿ ರೂ.ಗೆ ಏರಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ಕೇರಳ ಸರ್ಕಾರ ಈ ಬೇಡಿಕೆಯನ್ನು ಮುಂದಿಟ್ಟು ಕೇಂದ್ರಕ್ಕೆ ಪತ್ರ ಕಳುಹಿಸಿತ್ತು. ಕೆಐಎಫ್‍ಬಿ ಮತ್ತು ಕಲ್ಯಾಣ ಪಿಂಚಣಿಗಾಗಿ ಪಡೆದ ಸಾಲಗಳ ಅಂಕಿಅಂಶಗಳನ್ನು ಮೌಲ್ಯಮಾಪನ ಮಾಡುವ ಮೂಲಕ ಕೇಂದ್ರವು ಸಾಲದ ಮಿತಿಯನ್ನು ನಿರ್ಧರಿಸಿದೆ.