ಬದಿಯಡ್ಕ : ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕರ 65ನೇ ಹುಟ್ಟು ಹಬ್ಬವನ್ನು ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕದ ಆಶ್ರಯದಲ್ಲಿ ಆ. 12 ರಂದು ಸಾಹಿತ್ತಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಸಲು ನಿರ್ಧರಿಸಲಾಗಿದೆ. ಉಳಿಯತ್ತಡ್ಕ ಶ್ರೀಶಕ್ತಿ ಸಭಾಭವನದಲ್ಲಿ ಉಳಿಯತ್ತಡ್ಕ ಅವರ ‘ಬದುಕು ಬರಹದ’ ಅವಲೋಕನ ಹಾಗೂ ಉಳಿಯತ್ತಡ್ಕರ ಸಾರ್ಥಕ ಬದುಕಿನ ಜತೆ ಪಯಣಿಸಿದವರ ಅವಿಸ್ಮರಣೀಯ ಸಂಗಮವನ್ನಾಗಿ ನಡೆಸಲು ಸಭೆ ತೀರ್ಮಾನಿಸಿದೆ.
ಗಡಿನಾಡು ಕಾಸರಗೋಡಿನ ಕನ್ನಡದ ಮಣ್ಣಿನಿಂದ ಇಂದು ಅಖಿಲ ಕರ್ನಾಟಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಉಳಿಯತ್ತಡ್ಕರು ಸಾಹಿತಿಯಾಗಿ, ಪತ್ರಕರ್ತರಾಗಿ, ಸಂಘಟಕರಾಗಿ, ಸಂಶೋಧಕರಾಗಿ,ಸ್ಮರಣ ಸಂಚಿಕೆಗಳ ಸಂಪಾದಕರಾಗಿ, ನಾಟಕಗಾರರಾಗಿ ಹೀಗೆ ಬಹುಮುಖಿ ವ್ಯಕ್ತಿತ್ವದಿಂದ ಗುರುತಿಸಿಕೊಂಡವರು. ಶತಮಾನ ಕಂಡ ಕಾಸರಗೋಡಿನ ತುಳು ಕನ್ನಡ ಮಣ್ಣಿನ ಕವಿ ಕಯ್ಯಾರರ ಅಚ್ಚುಮೆಚ್ಚಿನ ಶಿಷ್ಯರಾಗಿ ಅದ್ವಿತೀಯ ಸಾಧಕ ಎನಿಸಿಕೊಂಡವರು ಆದ್ದರಿಂದ ಅವರ 65ನೇ ವರ್ಷದ ಜನ್ಮ ದಿನದ ಸಂಭ್ರಮವನ್ನು ವಿಪುಲವಾಗಿ ನಡೆಸಲು ಯೋಜನೆ ಇರಿಸಲಾಗಿದೆ ಎಂದು ಸಮತಾ ಸಾಹಿತ್ಯ ವೇದಿಕೆ ತಿಳಿಸಿದೆ. ಕಾರ್ಯಕ್ರಮದಲ್ಲಿ ಉಳಿಯತ್ತಡ್ಕರ ಕಾವ್ಯದ ಗಾಯನ, ಕವನ,ಗದ್ಯ ಹಾಗೂ ಪತ್ರಿಕಾ ಬರಹದ ಬಗ್ಗೆ ವಿಚಾರಗೋಷ್ಠಿ, ಅವರ ಬದುಕಿನ ಬಗೆಗಿನ ಸಾಕ್ಷ್ಯಚಿತ್ರ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಯಶಸ್ವಿಯ ಬಗ್ಗೆ ನೀರ್ಚಾಲಿನಲ್ಲಿ ನಡೆದ ಸಭೆಯಲ್ಲಿ ಕೃಷ್ಣ ಡಿ.ದರ್ಬೆತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಸಮತಾ ಸಾಹಿತ್ಯ ವೇದಿಕೆಯ ಕವಿ,ಉಪನ್ಯಾಸಕ ಬಾಲಕೃಷ್ಣ ಬೇರಿಕೆ, ಸುಂದರ ಬಾರಡ್ಕ, ಅಂಬೇಡ್ಕರ್ ವಿಚಾರ ವೇದಿಕೆಯ ಗೌರವಾಧ್ಯಕ್ಷ ನಾರಾಯಣ ಬಾರಡ್ಕ, ಅಧ್ಯಕ್ಷ ರಾಮ ಪಟ್ಟಾಜೆ, ಬೊಳಿಕೆ ಜಾನಪದ ಕಲಾ ತಂಡದ ನಿರ್ದೇಶಕ ಶಂಕರ ಸ್ವಾಮಿಕೃಪಾ, ತುಳುವೆರೆ ಆಯನೋ ಕೂಟದ ಕಾರ್ಯದರ್ಶಿ ಜಯ ಮಣಿಯಂಪಾರೆ, ನಾರಿ ಚಿನ್ನಾರಿ ಸಂಘಟನೆಯ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ, ಕವಯತ್ರಿ ವನಜಾಕ್ಷಿ ಚಂಬ್ರಕಾನ, ಸುಜಾತ ಕನಿಯಾಲ, ಶ್ರೀಜ ಬಾರಡ್ಕ, ವರ್ಷಾ ಆರ್.ಕೆ, ಸುಮ ವಿಜೀತ್, ಚಂದ್ರಕಲಾ ನೀರಾಳ ಮೊದಲಾದವರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.