ಕುಂಬಳೆ: ವಿದ್ಯಾರ್ಥಿಗಳು ತರಗತಿಯಲ್ಲಿ ಪಠ್ಯ ಕಲಿಕೆಯ ಜೊತೆಗೆ ನೀರಿನ ಪರೀಕ್ಷೆಯನ್ನೂ ನಡೆಸಲಿದ್ದಾರೆ. ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಜಿಲ್ಲೆಯ 12 ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆ ಲ್ಯಾಬ್ ಗಳನ್ನು ಸ್ಥಾಪಿಸಲಾಗಿದೆ. ಜಿಎಚ್‍ಎಸ್‍ಎಸ್ ಪಟ್ಲ, ಜಿಎಚ್‍ಎಸ್‍ಎಸ್ ಬಳವಂತೋಡ್, ಜಿಎಚ್‍ಎಸ್‍ಎಸ್ ಬಳಾಲ್, ಜಿಎಚ್‍ಎಸ್‍ಎಸ್ ಪಿಲಿಕೋಡ್, ಜಿವಿಎಚ್‍ಎಸ್‍ಎಸ್ ಕಯ್ಯೂರು, ಜಿವಿಎಚ್‍ಎಸ್‍ಎಸ್ ಮಡಿಕೈ 2, ಜಿಎಚ್‍ಎಸ್‍ಎಸ್ ಪೈವಳಿಕೆ, ಜಿವಿಎಚ್‍ಎಸ್ ಮೊಗ್ರಾಲ್, ಜಿಎಚ್‍ಎಸ್‍ಎಸ್ ಬಂಗರ, ಜಿವಿಎಚ್‍ಎಸ್‍ಎಸ್ ಮುಳ್ಳೇರಿಯ, ಜಿಎಚ್‍ಎಸ್‍ಎಸ್ ಕುಂಡಂಗುಳಿ, ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಉಪಕರಣಗಳು ಮತ್ತು ಸಂಬಂಧಿತ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದೆ.
ವಿದ್ಯಾರ್ಥಿಗಳು ಪ್ರತಿ ಪ್ರದೇಶದ ಬಾವಿಗಳು ಮತ್ತು ಜಲಾಶಯಗಳಿಂದ ನೀರನ್ನು ಸಂಗ್ರಹಿಸಿ ನೀರಿನ ಮಾದರಿಯನ್ನು ಶಾಲೆಯಲ್ಲಿ ಸ್ಥಾಪಿಸಲಾದ ಲ್ಯಾಬ್‍ನಲ್ಲಿ ಪರೀಕ್ಷಿಸಿ ಅಧ್ಯಯನ ನಡೆಸಲಿರುವರು. ರಸಾಯನ ಶಾಸ್ತ್ರ ವಿಭಾಗದ ಶಿಕ್ಷಕರು ಹಾಗೂ ಪ್ಲಸ್ ಒನ್ ವಿದ್ಯಾರ್ಥಿಗಳು ನಡೆಸುವ ವೈಜ್ಞಾನಿಕ ಪರೀಕ್ಷೆಯ ನಂತರ ಪರೀಕ್ಷಾ ಫಲಿತಾಂಶ ಹಾಗೂ ಗುಣಮಟ್ಟವನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಲಾಗುವುದು.
ಇದಕ್ಕೂ ಮುನ್ನ ಜಿಲ್ಲೆಯ ವಿವಿಧ ಬಾವಿಗಳು ಹಾಗೂ ಜಲಮೂಲಗಳಿಂದ ಸಂಗ್ರಹಿಸಿದ ನೀರಿನ ಮಾದರಿಗಳ ಗುಣಮಟ್ಟ ಪರೀಕ್ಷೆ ನಡೆಸಿದಾಗ ಬಹುತೇಕ ಮಾದರಿಗಳು ಕಲುಷಿತಗೊಂಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಯ್ದ 12 ಶಾಲೆಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಆರಂಭಿಸಲು ನಿರ್ಧರಿಸಲಾಗಿದೆ. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಬಾವಿಯ ಜಲಮೂಲಗಳ ನೀರಿನ ಮಾದರಿಯಲ್ಲಿ ಇ-ಕೊಲಿ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿತ್ತು. ಪರೀಕ್ಷಿಸಿದ ಮಾದರಿಗಳಲ್ಲಿ, ಮೂರು 90ಶೇ. ಕ್ಕಿಂತ ಹೆಚ್ಚು, ಮೂರು 80-90 ಶೇ. ನಡುವೆ, 12 60-80 ಶೇ. ನಡುವೆ ಮತ್ತು ಏಳು 50 ಶೇ. ಕ್ಕಿಂತ ಹೆಚ್ಚು ಕಲುಷಿತಗೊಂಡಿರುವುದು ಕಂಡುಬಂದಿದೆ. ಇ ಕೊಲಿ ಬ್ಯಾಕ್ಟೀರಿಯಾದ ನೈಜ ಸ್ಥಿತಿಯನ್ನು ಗುರುತಿಸುವ ಸಲುವಾಗಿ, ಹಸಿರು ಕೇರಳ ಮಿಷನ್ ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ರಾಜ್ಯದಾದ್ಯಂತ ಶಾಲೆಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಕೆ.ಐ.ಐ.ಡಿ.ಸಿ(ಕೇರಳ ನೀರಾವರಿ ಮೂಲಸೌಕರ್ಯ ಅಭಿವೃದ್ಧಿ ನಿಗಮ) ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದೆ.