ಪ್ಯಾರಿಸ್: ಕಾರು ಚಾಲನೆ ಮಾಡುತ್ತಿದ್ದ 17 ವರ್ಷದ ಯುವಕನನ್ನು ಪೊಲೀಸ್ ಅಧಿಕಾರಿಗಳು ವಿನಾಕಾರಣ ಗುಂಡಿಟ್ಟು ಕೊಂದ ನಂತರ ಫ್ರಾನ್ಸ್‌ನಾದ್ಯಂತ ಭುಗಿಲೆದ್ದಿದ್ದ ಗಲಭೆ ನಾಲ್ಕನೇ ದಿನವೂ ಮುಂದುವರಿದಿತ್ತು. 45,000 ಪೊಲೀಸ್ ಸಿಬ್ಬಂದಿ ನಿಯೋಜನೆ ಮತ್ತು ಒಂದೇ ದಿನ 1,311 ಮಂದಿ ಬಂಧನದ ಹೊರತಾಗಿಯೂ ಕಾರುಗಳು, ಕಟ್ಟಡಗಳಿಗೆ ಬೆಂಕಿ ಇಡುವ ಮತ್ತು ಅಂಗಡಿ ಮುಂಗಟ್ಟುಗಳನ್ನು ಲೂಟಿ ಮಾಡುವ ಕೃತ್ಯಗಳು ನಡೆದಿವೆ.
ಈ ಮಧ್ಯೆ ಕುಟುಂಬಸ್ಥರು ಯುವಕ ನಹೇಲ್ ಅಂತ್ಯಸಂಸ್ಕಾರ ನಡೆಸಿದ್ದಾರೆ.
ತಮ್ಮ ಮಕ್ಕಳನ್ನು ಮನೆಯೊಳಗೇ ಇರಿಸಿಕೊಳ್ಳುವಂತೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಪೋಷಕರಲ್ಲಿ ಮನವಿ ಮಾಡಿದ್ದಾರೆ. ಆದರೂ ಯುವ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಸಂಘರ್ಷ ಭುಗಿಲೆದ್ದಿದೆ. ಉದ್ರಿಕ್ತ ಪ್ರತಿಭಟನಕಾರರು ಈವರೆಗೆ ಸುಮಾರು 2,500 ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರ ಆರಂಭವಾದಾಗಿನಿಂದ ಈವರೆಗೆ ಪೊಲೀಸರು 2,400 ಮಂದಿಯನ್ನು ಬಂಧಿಸಿದ್ದಾರೆ. ಶಾಂತಿ ಪುನಃಸ್ಥಾಪಿಸಲು ಸರ್ಕಾರ ಹೆಣಗಾಡುತ್ತಿದ್ದು ಬಂಧಿತರ ಸಂಖ್ಯೆ ಏರಿಕೆಯಾಗುತ್ತಿದೆ. ಹಾಗಿದ್ದರೂ ಉದ್ರಿಕ್ತ ಗುಂಪುಗಳಿಂದ ಹಾನಿ ಮುಂದುವರಿದಿದೆ.
ಗಲಭೆಯಲ್ಲಿ ನೂರಾರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. ಆದರೆ ಎಷ್ಟು ಮಂದಿ ಪ್ರತಿಭಟನಕಾರರು ಗಾಯಗೊಂಡಿದ್ದಾರೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಮಾರ್ಸೈಲ್ ನಗರದಲ್ಲಿ ಉದ್ರಿಕ್ತರು ಬಂದೂಕು ಅಂಗಡಿಯೊಳಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ಅಪಹರಿಸಿದ್ದಾರೆ. ಇಲ್ಲಿ ಸಿಕ್ಕಸಿಕ್ಕ ಕಾರುಗಳಿಗೆ ಬೆಂಕಿ ಇಡುತ್ತಿದ್ದ ಮತ್ತು ಅಂಗಡಿಗಳ ಗಾಜುಗಳನ್ನು ಒಡೆಯುತ್ತಿದ್ದ ಸುಮಾರು 90 ಜನರಿದ್ದ ಗುಂಪನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಹಿಂದಿನ ರಾತ್ರಿಗಿಂತ ಕಡಿಮೆ ಕಾರುಗಳು ಮತ್ತು ಪೊಲೀಸ್ ಠಾಣೆಗಳು ಬೆಂಕಿಗೆ ಆಹುತಿಯಾಗಿವೆ. ಹಿಂಸಾಚಾರದ ತೀವ್ರತೆ ಕಡಿಮೆಯಾಗುತ್ತಿದೆ' ಎಂದು ಒಳಾಡಳಿತ ಸಚಿವ ಗೆರಾಲ್ಡ್ ದರ್ಮನಿನ್ ತಿಳಿಸಿದ್ದಾರೆ.