ಕೊಚ್ಚಿ: ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ತಿರುವನಂತಪುರ ಮತ್ತು ಕೊಲ್ಲಂನಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಇದರೊಂದಿಗೆ ಹವಾಮಾನ ಇಲಾಖೆಯು ರಾಜ್ಯದ 12 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಮತ್ತು ಎರಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಎರ್ನಾಕುಳಂ, ಕಾಸರಗೋಡು ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆ ಘೋಷಿಸಲಾಗಿತ್ತು. ನಾಳೆಯೂ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಪರ್ವತ ಪ್ರದೇಶಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ತೀವ್ರ ಎಚ್ಚರಿಕೆಯನ್ನು ಸೂಚಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ತೆರಳುವುದನ್ನು ನಿಷೇಧಿಸಲಾಗಿದೆ.
ಭಾರೀ ಮಳೆಯಿಂದ ಅಪಾರ ಹಾನಿಯಾಗಿದೆ. ತಿರುವನಂತಪುರದ ಮೂಡಲಪೋಜಿಯಲ್ಲಿ ಮೀನುಗಾರಿಕಾ ದೋಣಿಯೊಂದು ಪಲ್ಟಿಯಾಗಿದೆ. ಕಾರ್ಮಿಕರು ಈಜಿ ಬಚವಾಗಿರುವರು. ಅಳಿವೆಯಲ್ಲಿ ಜೋರಾದ ಪ್ರವಾಹಕ್ಕೆ ದೋಣಿ ಮಗುಚಿ ಬಿದ್ದಿದೆ. ಆಲಪ್ಪುಳದ ಹಲವು ಸ್ಥಳಗಳು ಜಲಾವೃತಗೊಂಡಿವೆ. ಪತ್ತನಂತಿಟ್ಟದ ಕುರುಂಬನ್‍ಮೂಜಿಯಲ್ಲಿ ಸುಮಾರು 250 ಕುಟುಂಬಗಳು ಸಿಲುಕಿಕೊಂಡಿವೆ. ಎರ್ನಾಕುಳಂನಲ್ಲಿ ಭಾರೀ ಮಳೆಯಿಂದಾಗಿ, ಕಲ್ಲುಗಣಿಗಾರಿಕೆ ಸೇರಿದಂತೆ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ತ್ರಿಶೂರ್ ನಲ್ಲಿ ಮರಗಳು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಪೆರಿಂಗಾವ್‍ನಿಂದ ಶೋರ್ನೂರಿಗೆ ಹೋಗುವ ಮಾರ್ಗದಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿದೆ.
ಕಾಸರಗೋಡಲ್ಲೂ ವ್ಯಾಪಕ ಮಳೆಯಿಂದ ಅಪಾರ ಹಾನಿಯಾಗಿದೆ. ನಿನ್ನೆ ಅಂಗಡಿಮೊಗರು ಶಾಲಾ ಬಾಲಕಿಯೋರ್ವೆ ಮರಬಿದ್ದು ದುರ್ಮಣಕ್ಕೊಳಗಾಗಿದ್ದಳು. ಹಲವೆಡೆ ಮರಗಳು ಧರಾಶಾಯಿಯಾಗಿದೆ. ಅಲ್ಲಲ್ಲಿ ಮಳೆ ನೀರು ಕಟ್ಟಿನಿಂತಿರುವುದೂ ಕಂಡುಬಂದಿದೆ.