ನವದೆಹಲಿ: ವರ್ಚುವಲ್ ಆಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಸೋಮವಾರ ದೇಶದ ವಿವಿಧ ಭಾಗಗಳಲ್ಲಿ ₹2,381ಕೋಟಿ ಮೌಲ್ಯದ 1.40 ಲಕ್ಷ ಕೆ.ಜಿಗೂ ಹೆಚ್ಚು ಮಾದಕ ದ್ರವ್ಯವನ್ನು ನಾಶಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ: ವರ್ಚುವಲ್ ಆಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಸೋಮವಾರ ದೇಶದ ವಿವಿಧ ಭಾಗಗಳಲ್ಲಿ ₹2,381ಕೋಟಿ ಮೌಲ್ಯದ 1.40 ಲಕ್ಷ ಕೆ.ಜಿಗೂ ಹೆಚ್ಚು ಮಾದಕ ದ್ರವ್ಯವನ್ನು ನಾಶಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಡ್ರಗ್ಸ್ ಸ್ಮಗ್ಲಿಂಗ್ ಮತ್ತು ನ್ಯಾಷನಲ್ ಸೆಕ್ಯುರಿಟಿ' ಕುರಿತ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಾ ಅವರು ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ವೀಕ್ಷಿಸುತ್ತಿದ್ದಾಗಲೇ ಮಾದಕ ವಸ್ತುಗಳನ್ನು ನಾಶ ಮಾಡಲಾಯಿತು. ಇದರಲ್ಲಿ ಬಹುಪಾಲು ಮಧ್ಯಪ್ರದೇಶದ್ದಾಗಿತ್ತು.
ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ) ಹೈದರಾಬಾದ್ ಘಟಕವು ವಶಪಡಿಸಿಕೊಂಡ 6,590 ಕೆ.ಜಿ ಮಾದಕವಸ್ತು, ಇಂದೋರ್ ಘಟಕ ವಶಪಡಿಸಿಕೊಂಡ 822 ಕೆ.ಜಿ ಮತ್ತು ಜಮ್ಮು ಘಟಕದಿಂದ ವಶಪಡಿಸಿಕೊಳ್ಳಲಾಗಿದ್ದ 356 ಕೆ.ಜಿ ಮಾದಕ ವಸ್ತುವನ್ನು ನಾಶಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ವಿವಿಧ ರಾಜ್ಯಗಳ ವಿವಿಧ ಕಾನೂನು ಜಾರಿ ಸಂಸ್ಥೆಗಳು ಮಾದಕ ದ್ರವ್ಯಗಳನ್ನು ನಾಶಪಡಿಸಿವೆ.
ಮಧ್ಯಪ್ರದೇಶದಲ್ಲಿ 1,03,884 ಕೆ.ಜಿ, ಅಸ್ಸಾಂನಲ್ಲಿ 1,486 ಕೆ.ಜಿ, ಚಂಡೀಗಢದಲ್ಲಿ 229 ಕೆ.ಜಿ, ಗೋವಾದಲ್ಲಿ 25 ಕೆ.ಜಿ, ಗುಜರಾತ್‌ನಲ್ಲಿ 4,277 ಕೆ.ಜಿ, ಹರಿಯಾಣದಲ್ಲಿ 2,458 ಕೆ.ಜಿ, ಜಮ್ಮು ಮತ್ತು ಕಾಶ್ಮೀರದಲ್ಲಿ 4,069 ಕೆ.ಜಿ, ಮಹಾರಾಷ್ಟ್ರದಲ್ಲಿ 159 ಕೆ.ಜಿ, ತ್ರಿಪುರಾದಲ್ಲಿ 1,803 ಕೆ.ಜಿ ಮತ್ತು ಉತ್ತರ ಪ್ರದೇಶದಲ್ಲಿ 4,049 ಕೆ.ಜಿ ಮಾದಕ ದ್ರವ್ಯ ನಾಶಪಡಿಸಲಾಗಿದೆ.
ಸೋಮವಾರದ ನಾಶಪಡಿಸಲಾದ ಮಾದಕ ದ್ರವ್ಯ ಸೇರಿ ಕೇವಲ ಒಂದು ವರ್ಷದಲ್ಲಿ ದೇಶದಾದ್ಯಂತ ನಾಶಪಡಿಸಲಾದ ಒಟ್ಟು ಪ್ರಮಾಣವು ಸುಮಾರು 10 ಲಕ್ಷ ಕೆ.ಜಿಗೆ ತಲುಪಿದ್ದು, ಇದರ ಮೌಲ್ಯ ₹12,000 ಕೋಟಿ ಆಗಿದೆ.