ಕೀವ್ : ರಷ್ಯಾ ಅತಿಕ್ರಮಣ ಮಾಡಿದ್ದ 14 ಚದರ ಕಿಲೋ ಮೀಟರ್ ಪ್ರದೇಶವನ್ನು ಮರುವಶಕ್ಕೆ ಪಡೆಯಲಾಗಿದೆ ಎಂದು ಉಕ್ರೇನ್ ಸೋಮವಾರ ತಿಳಿಸಿದೆ.
ಕಳೆದವಾರ ಉಕ್ರೇನ್ ಸೇನಾ ಪಡೆಯು ಬಖ್‌ಮತ್ ಸೆಕ್ಟರ್‌ನಲ್ಲಿ ನಾಲ್ಕು ಚದರ ಕಿಲೋಮೀಟರ್ ಪ್ರದೇಶ ಸೇರಿದಂತೆ ಹತ್ತಕ್ಕೂ ಹೆಚ್ಚು ಚದರ ಕಿಲೋಮೀಟರ್ ಪ್ರದೇಶವನ್ನು ರಷ್ಯಾದ ಅತಿಕ್ರಮಣದಿಂದ ಸ್ವತಂತ್ರಗೊಳಿಸಿದೆ ಎಂದು ಸೇನಾ ವಕ್ತಾರ ಆಯಂಡ್ರಿಯ್ ಕೊವಲ್‌ಯೊಯ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ರಷ್ಯಾ ಪಡೆಗಳು ಮೇನಲ್ಲಿ ವಶಕ್ಕೆ ಪಡೆದಿದ್ದ ಬಖ್‌ಮತ್ ಪ್ರದೇಶದಲ್ಲಿ ಉಭಯ ದೇಶಗಳ ಸೇನಾಪಡೆಗಳ ಮಧ್ಯೆ ತೀವ್ರ ಹೋರಾಟ ನಡೆದಿತ್ತು ಎಂದೂ ತಿಳಿಸಿದ್ದಾರೆ. ಇದರೊಂದಿಗೆ ಉಕ್ರೇನ್ ಕಳೆದ ತಿಂಗಳಿಂದ ಈಚೆಗೆ 193 ಚದರ ಕಿಲೋಮೀಟರ್ ಪ್ರದೇಶವನ್ನು ಮರುವಶಕ್ಕೆ ಪಡೆದಂತಾಗಿದೆ.
ಶಾಲೆ ಮೇಲೆ ರಷ್ಯಾ ವಾಯುದಾಳಿ:
ದಕ್ಷಿಣ ಉಕ್ರೇನ್‌ನಲ್ಲಿನ ಶಾಲೆಯೊಂದರ ಮೇಲೆ ರಷ್ಯಾ ವಾಯುದಾಳಿ ನಡೆಸಿದ್ದು, ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾನವೀಯ ನೆರವು ಪಡೆಯಲು ಜನರು ಶಾಲೆಗೆ ತೆರಳಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ ಎಂದು ಝಪೊರಿಝಜಿಯಾ ಪ್ರದೇಶದ ಗವರ್ನರ್ ತಿಳಿಸಿದ್ದಾರೆ. ದಾಳಿಯನ್ನು 'ಯುದ್ಧ ಅಪರಾಧ' ಎಂದು ಟೀಕಿಸಿದ್ದಾರೆ.