ಕೊಚ್ಚಿ: ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಮಹಿಳೆಯೊಬ್ಬಳು 1500 ರೂ. ಹಣಕ್ಕಾಗಿ ಹೆತ್ತ ಮಗಳನ್ನೇ ತಲೆಹಿಡಿದಿದ್ದು, ಈ ಪ್ರಕರಣದಲ್ಲಿ ಓರ್ವ ವ್ಯಕ್ತಿ, ಆತನ ಗರ್ಲ್ಫ್ರೆಂಡ್ ಹಾಗೂ ಸಂತ್ರಸ್ತೆಯ ತಾಯಿಯನ್ನು ಬಂಧಿಸಲಾಗಿದೆ.
ತಮಿಳುನಾಡು ಮೂಲದ ಮಹಿಳೆ ಹಣ ಪಡೆದ ಬಳಿಕ ತನ್ನ ಮಗಳನ್ನು ಕೇರಳದ ಎರ್ನಾಕುಲಂಗೆ ಕರೆತಂದಳು.
ಕಾಮಾಂಧನಿಗೆ ಒಪ್ಪಿಸಿದ ತಾಯಿ
ಆರೋಪಿಗಳಾದ ಅಖಿಲ್ ದೇವ್ (25) ಮತ್ತು ಆತನ ಗರ್ಲ್ಫ್ರೆಂಡ್ ವಿನಿಶಾ (24) ಹಾಗೂ ಸಂತ್ರಸ್ತೆಯ ತಾಯಿಯನ್ನು ಕಟ್ಟಕ್ಕಾಡ ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಲಂನ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ತಾಯಿ ಮತ್ತು ಮಗಳನ್ನು ಆರೋಪಿ ಅಖಿಲ್ ದೇವ್ ರೈಲಿನಲ್ಲಿ ಭೇಟಿಯಾಗಿದ್ದ. ಬಳಿಕ ಜುಲೈ 3ರಂದು ಎರ್ನಾಕುಲಂನಲ್ಲಿ ಮಹಿಳೆಯ 13 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದಾದ ನಂತರ ತಾಯಿಗೆ 1500 ರೂ. ಪಾವತಿಸಿದ ಬಳಿಕ ಆರೋಪಿ ಅಖಿಲ್, ಸಂತ್ರಸ್ತೆಯೊಂದಿಗೆ ಕಟ್ಟಕ್ಕಾಡಕ್ಕೆ ಬಂದಿದ್ದ.
ಹಲವು ಪ್ರದೇಶದಲ್ಲಿ ಅತ್ಯಾಚಾರ
ಮೊದಲು ಕಟ್ಟಕ್ಕಾಡದಲ್ಲಿರುವ ಕೋಣೆಯೊಂದರಲ್ಲಿ ಬಾಲಕಿ ಮೇಲೆ ದೌರ್ಜನ್ಯ ನಡೆಸಿದ್ದಾನೆ. ಆ ಬಳಿಕ ಎಡವಾಚಲ್ನಲ್ಲಿರುವ ತನ್ನ ಮನೆಯಲ್ಲೇ ಮತ್ತೊಮ್ಮೆ ಬಾಲಕಿ ಮೇಲೆ ಆರೋಪಿ ಅಖಿಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದಾದ ಬಳಿಕ ಸಂತ್ರಸ್ತೆ ಮತ್ತು ಗರ್ಲ್ಫ್ರೆಂಡ್ ಜೊತೆ ಆರೋಪಿಯು ನೆಯ್ಯಟ್ಟಿಂಕರದಲ್ಲಿ ತಾತ್ಕಾಲಿಕ ಉದ್ಯೋಗ ಮಾಡುತ್ತಿದ್ದ ಕೋಯರ್ಫೆಡ್ ಕಂಪನಿ ಬಳಿ ಬರುತ್ತಾರೆ. ಅಲ್ಲಿ ಅಖಿಲ್ ಕಾರಿನಿಂದ ಕೆಳಗೆ ಇಳಿದು, ಹೋಗುವ ಮುನ್ನ ಆಕೆಯ ತಾಯಿ ಬಂದು ಕರೆದುಕೊಂಡು ಹೋಗುತ್ತಾರೆ ಎಂದು ವಿನಿಶಾಗೆ ಅಖಿಲ್ ಹೇಳುತ್ತಾನೆ. ಬಳಿಕ ವಿನಿಶಾ ಮತ್ತು ಸಂತ್ರಸ್ತೆ ಮನೆಗೆ ಹೋಗುತ್ತಾರೆ.
ಗರ್ಲ್ಫ್ರೆಂಡ್ ತಾಯಿಯಿಂದ ಪ್ರಕರಣ ಬೆಳಕಿಗೆ
ಇಬ್ಬರ ವರ್ತನೆಯಿಂದ ಅನುಮಾನಗೊಂಡು ಅಖಿಲ್, ಗರ್ಲ್ಫ್ರೆಂಡ್ ವಿನಿಶಾ ತಾಯಿ ಪೊಲೀಸರಿಗೆ ದೂರು ನೀಡಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಆರೋಪಿಗಳನ್ನು ಬಲೆಗೆ ಕೆಡವಿದ್ದು, ಅವರ ವಿರುದ್ಧ ಪೊಕ್ಸೊ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.