ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯನ್ನು ಗುರುವಾರ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 15, 2023 ರವರೆಗೆ ವಿಸ್ತರಿಸಿದೆ.
ಮಿಶ್ರಾ ಅಧಿಕಾರಾವಧಿ ವಿಸ್ತರಣೆಗೆ ಅನುಮತಿ ನೀಡಿದ ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ, ಇದೇ ಕೊನೆ, ಇನ್ನು ಮುಂದೆ ಯಾವುದೇ ವಿಸ್ತರಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಮಿಶ್ರಾ ಅವರು ಸೆಪ್ಟೆಂಬರ್ 15-16ರ ಮಧ್ಯರಾತ್ರಿವರೆಗೆ ಮಾತ್ರ ಇಡಿ ನಿರ್ದೇಶಕರಾಗಿರಲಿದ್ದಾರೆ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಮಿಶ್ರಾ ಅವರ ಅವಧಿಯನ್ನು ಏಕೆ ವಿಸ್ತರಿಸಬೇಕು? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು ಮತ್ತು ಪ್ರಸ್ತುತ ಮುಖ್ಯಸ್ಥರನ್ನು ಹೊರತುಪಡಿಸಿ ಇಡೀ ಇಲಾಖೆ "ಅಸಮರ್ಥರಿಂದ ತುಂಬಿದೆಯೇ" ಎಂದು ಕಿಡಿ ಕಾರಿದೆ.
“ನಿಮ್ಮ ಇಡೀ ಇಲಾಖೆಯು ಅಸಮರ್ಥ ವ್ಯಕ್ತಿಗಳಿಂದ ತುಂಬಿದೆ ಮತ್ತು ನಿಮ್ಮ ಇಲಾಖೆಯು ಒಬ್ಬನೇ ಒಬ್ಬ ಸಮರ್ಥ ವ್ಯಕ್ತಿಯನ್ನು ಮಾತ್ರ ಹೊಂದಿದೆ. ಆ ಒಬ್ಬ ವ್ಯಕ್ತಿಯಿಲ್ಲದೆ ನೀವು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ಅಸಹಾಯಕತೆ ತೋರಿಸುತ್ತಿಲ್ಲವೇ? ಇದು ಇಡಿ ಬಲವನ್ನು ಕುಗ್ಗಿಸುವುದಿಲ್ಲವೇ? ಉದಾಹರಣೆಗೆ ನಾನು ಸಿಜೆಐ ಆಗಿದ್ದೇನೆ ಮತ್ತು ಮುಂದುವರಿಯಲು ನನಗೆ ಸಾಧ್ಯವಾಗುತ್ತಿಲ್ಲ ಎಂದಾಗ ಸುಪ್ರೀಂ ಕೋರ್ಟ್ ಮುಚ್ಚಿಹೋಗುತ್ತದೆಯೇ? ಎಂದು ನ್ಯಾಯಮೂರ್ತಿ ಗವಾಯಿ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದರು.
ಜುಲೈ 11 ರಂದು ಮಿಶ್ರಾ ಅವಧಿ ವಿಸ್ತರಣೆ "ಕಾನೂನು ಬಾಹಿರ" ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ನಂತರ, ಅವರ ಅಧಿಕಾರಾವಧಿಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸುವಂತೆ ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದೆ. ಮುಂದೆ ಈ ಸಂಬಂಧ ಯಾವುದೇ ಅರ್ಜಿಗಳನ್ನು ನ್ಯಾಯಾಲಯ ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ.
ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, "ಕೆಲವು ನೆರೆಯ ರಾಷ್ಟ್ರಗಳು, ಭಾರತದ ಎಫ್‌ಎಟಿಎಫ್‌ನ 'ಗ್ರೇ ಲಿಸ್ಟ್'ಗೆ ತರಬೇಕೆಂದು ಬಯಸುತ್ತಿವೆ. ಆದ್ದರಿಂದ ಇಡಿ ಮುಖ್ಯಸ್ಥರಾಗಿ ಮಿಶ್ರಾ ಮುಂದುವರೆಯುವ ಅಗತ್ಯ ಇದೆ" ಎಂದು ಹೇಳಿದರು.