ಜೈಪುರ: ಪೆಟ್ರೋಲ್ ಬೆಲೆ ಲೀಟರ್ ಗೆ ಕೇವಲ 15ರೂಗೆ ಇಳಿಕೆಯಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ರಾಜಸ್ಥಾನದ ಪ್ರತಾಪಗಢದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ನಿತಿನ್ ಗಡ್ಕರಿ, ಮುಂಬರುವ ವರ್ಷಗಳಲ್ಲಿ ಇಂಧನ ದರ ತೀವ್ರ ಕುಸಿತ ಕಾಣಲಿದ್ದು, ಒಂದು ಲೀಟರ್ ಪೆಟ್ರೋಲ್ 15 ರೂಪಾಯಿಗೆ ಸಿಗಲಿದೆ ಎಂದು ಹೇಳಿದ್ದಾರೆ. ಅವರ ಹೇಳಿಕೆ ಹಿಂದೆ ಒಂದು ಸೂತ್ರವಿದ್ದು, ಅದೇನೆಂದರೆ ಬರಲಿರುವ ವರ್ಷಗಳಲ್ಲಿ ದೇಶಾದ್ಯಂತ ರಸ್ತೆಗಳಲ್ಲಿ ಎಲ್ಲ ವಾಹನಗಳು ಎಥನಾಲ್ ಇಂಧನ ಆಧಾರಿತವಾಗಿ ಒಡಲಿವೆ. ಒಂದೊಮ್ಮೆ ಬಹುತೇಕ ಜನರು ಇಂತಹ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿದರೇ ಒಂದು ಲೀಟರ್ ಪೆಟ್ರೋಲ್ 15 ರೂಪಾಯಿಗೆ ಕುಸಿಯಲಿದೆ ಎಂಬುದು ಸಚಿವರ ಲೆಕ್ಕಾಚಾರವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡುತ್ತದೆ ಎಂದು ಹೇಳಿದ್ದಾರೆ.
ಅನ್ನದಾತರಲ್ಲ... ಇನ್ನು ಮುಂದೆ ರೈತರೇ ಶಕ್ತಿದಾತರು
ಇದೇ ವೇಳೆ 'ಅನ್ನದಾತರಾಗಿರುವ ರೈತರು, ಇನ್ಮುಂದೆ ಶಕ್ತಿದಾತರಾಗಲಿದ್ದಾರೆ ಎಂದು ಹೇಳಿದ ಗಡ್ಕರಿ ಮುಂಬರುವ ವರ್ಷಗಳಲ್ಲಿ ಎಲ್ಲ ವಾಹನಗಳು ರೈತರು ಉತ್ಪಾದಿಸುವ ಎಥೆನಾಲ್ ಮೂಲಕ ಚಲಿಸಲಿವೆ. ಸರಾಸರಿ 60% ಎಥೆನಾಲ್ ಹಾಗೂ 40% ಎಲೆಕ್ಟ್ರಿಸಿಟಿ ಪಡೆದರೆ, ಆಗ 1 ಲೀಟರ್ ಪೆಟ್ರೋಲ್ ದರ 15 ರೂಪಾಯಿಗೆ ಇಳಿಕೆಯಾಗಲಿದೆ' ಎಂದು ಹೇಳಿದ್ದಾರೆ.
ದೇಶಾದ್ಯಂತ ಎಥನಾಲ್ ಚಾಲಿತ ವಾಹನಗಳನ್ನು ಮುಂಬರುವ ವರ್ಷಗಳಲ್ಲಿ ಹೇರಳವಾಗಿ ಬಳಕೆ ಮಾಡುವುದರಿಂದ ವಾಯುವಾಲಿನ್ಯ ಕಡಿಮೆಯಾಗುತ್ತದೆ. ಕಚ್ಚಾ ತೈಲಕ್ಕಾಗಿ ವಿದೇಶಗಳಿಗೆ ಅವಲಂಬನೆಯಾಗುವುದು ಇಳಿಮುಖವಾಗುತ್ತದೆ. ಇಂಧನ ಆಮದು ಮಾಡಿಕೊಳ್ಳಲು ಖರ್ಚಾಗುತ್ತಿರುವ ಸರಿ ಸುಮಾರು ರೂ.16 ಲಕ್ಷ ಕೋಟಿ ಹಣ, ದೇಶದ ರೈತರಿಗೆ ಸಿಗುತ್ತದೆ. ಕೃಷಿ ತ್ಯಾಜ್ಯ (ಉದಾಹರಣೆಗೆ ಭತ್ತದ ಹುಲ್ಲು), ಅಕ್ಕಿಯಿಂದ ಎಥನಾಲ್ ಫ್ಯುಯೆಲ್ ತಯಾರಿಸಲಾಗುತ್ತದೆ. ಇಂತಹ ವಾಹನಗಳ ಬಳಕೆ ಹೆಚ್ಚಾದಾಗ ಎಥನಾಲ್ ಇಂಧಕ್ಕೆ ಭರ್ಜರಿ ಬೇಡಿಕೆ ಬಂದು, ಆ ಹಣ ನೇರವಾಗಿ ರೈತರಿಗೆ ಸಿಗುತ್ತದೆ. ಸದ್ಯ, ವಿವಿಧ ದ್ವಿಚಕ್ರ ಹಾಗೂ ಕಾರು ತಯಾರಕ ಕಂಪನಿಗಳು E20 (80% ಪೆಟ್ರೋಲ್ ಹಾಗೂ 20% ಎಥನಾಲ್) ಆಧಾರಿತ ಎಂಜಿನ್ ಹೊಂದಿರುವ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದರು.
ಈ ಹಿಂದೆ ಸ್ವತಃ ನಿತಿನ್ ಗಡ್ಕರಿ ಅವರೇ ಟೊಯೊಟಾ ಕ್ಯಾಮ್ರಿ ಫ್ಲೆಕ್ಸ್ ಫ್ಯೂಯಲ್ ಆವೃತ್ತಿ ಆಗಸ್ಟ್ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಫ್ಲೆಕ್ಸ್ ಫ್ಯೂಯಲ್ ಕಾರುಗಳು, ಎಥೆನಾಲ್‌ನಂತಹ ಪರ್ಯಾಯ ಇಂಧನಗಳ ನೆರವಿನಿಂದ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ. ಇದಿಷ್ಟೇ ಅಲ್ಲದೆ, ಬಜಾಜ್, ಟಿವಿಎಸ್ ಮತ್ತು ಹೀರೋ ಕಂಪನಿಗಳ ದ್ವಿಚಕ್ರ ವಾಹನಗಳು 100% ಎಥೆನಾಲ್‌ನಲ್ಲಿ ಚಲಿಸುವ ತಂತ್ರಜ್ಞಾನದೊಂದಿಗೆ ಬರಲಿವೆ ಎಂದು ಸಚಿವರು ಹೇಳಿದ್ದರು.
ದೀರ್ಘಕಾಲದವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಇವುಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದರೂ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಇಳಿಕೆಯಾಗಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ನಷ್ಟವನ್ನು ತುಂಬುತ್ತಿವೆ ಎಂದು ತಜ್ಞರು ಹೇಳುತ್ತಾರೆ. ತೈಲ ಮಾರುಕಟ್ಟೆ ಕಂಪನಿಗಳು ಲಾಭಕ್ಕೆ ಮರಳಿದ ನಂತರ ಇಂಧನ ಬೆಲೆ ಕಡಿಮೆಯಾಗಬಹುದು ಎಂದು ತಜ್ಞರು ಹೇಳುತ್ತಾರೆ.