ನವದೆಹಲಿ: ಭಾರತದ ಮೊದಲ ವೈದ್ಯೆ ಆನಂದಿಬಾಯಿ ಜೋಶಿ ಅವರ ಜೀವನಗಾಥೆ ಕುರಿತ ಪುಸ್ತಕ 'ಆನಂದಿಬಾಯಿ ಜೋಶಿ: ಎ ಲೈಫ್ ಇನ್ ಪೋಯೆಮ್ಸ್' ಜುಲೈ 16ರಂದು ಬಿಡುಗಡೆಯಾಗಲಿದೆ.
ಈ ಪುಸ್ತಕವನ್ನು ಅಮೆರಿಕ ಮೂಲದ ಕವಿ, ಲೇಖಕಿ ಶಿಖಾ ಮಾಳವೀಯ ಅವರು ರಚಿಸಿದ್ದಾರೆ. ಹಾರ್ಪರ್‌ಕಾಲಿನ್ಸ್ ಇಂಡಿಯಾ ಸಂಸ್ಥೆಯು ಇದನ್ನು ಪ್ರಕಟಿಸಿದೆ. ಪುಸ್ತಕದ ಬೆಲೆಯು ₹399 ಇರಲಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.
ವಿದೇಶಕ್ಕೆ ತೆರಳಿ ವೈದ್ಯಕೀಯ ಶಿಕ್ಷಣ ಪಡೆದ ಆನಂದಿಬಾಯಿ ಅವರು ಎದುರಿಸಿದ ಸವಾಲುಗಳು, ಸವೆಸಿದ ಹಾದಿ ಮತ್ತು ಸಾಧನೆ ಕುರಿತ ಮಾಹಿತಿಯನ್ನು ಲೇಖಕರು ಪದ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
'ಆನಂದಿಬಾಯಿ ಅವರ ಜೀವನ ಕುರಿತು ಹೆಚ್ಚಿನ ಮಾಹಿತಿ ಅರಸಿ ಹೊರಟಾಗ ಅವರ ಸಂಕಷ್ಟಗಳು ಎಷ್ಟು ಸಾರ್ವತ್ರಿಕವಾಗಿವೆ ಎಂಬುದನ್ನು ನಾನು ಅರಿತೆ' ಎಂದು ಲೇಖಕಿ ಶಿಖಾ ಅವರು ಹೇಳಿದ್ದಾರೆ.
1865ರ ಮಾರ್ಚ್ 31ರಂದು ಮಹಾರಾಷ್ಟ್ರದ ಕಲ್ಯಾಣ್ ಪಟ್ಟಣದಲ್ಲಿ ಸಾಂಪ್ರದಾಯಿಕ ಮನೆತನವೊಂದರಲ್ಲಿ ಆನಂದಿಬಾಯಿ ಅವರು ಜನಿಸಿದರು. ಒಂಬತ್ತನೇ ವಯಸ್ಸಿನಲ್ಲಿ ತಮಗಿಂತ 16 ವರ್ಷ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗಿದ್ದರು. ಅವರ ಪತಿಗೆ ಇದು ನಾಲ್ಕನೇ ಮದುವೆಯಾಗಿತ್ತು. ಚಿಕ್ಕವಯಸ್ಸಿನಲ್ಲಿಯೇ ಅವರು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಬದುಕುಳಿಯಲಿಲ್ಲ.
ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ಅವರು ವೈದ್ಯ ವೃತ್ತಿ ಆರಂಭಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡರು. ಜೊತೆಗೆ, ಅಮೆರಿಕದಲ್ಲಿ ಪಾಶ್ಚಿಮಾತ್ಯ ವೈದ್ಯಕೀಯ ಪದ್ದತಿಯನ್ನು ಅಭ್ಯಸಿಸಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಆನಂದಿಬಾಯಿ ಅವರದ್ದು.
ಕ್ಷಯ ರೋಗದ ಕಾರಣ ಅವರ ತಮ್ಮ 22ನೇ ವಯಸ್ಸಿನಲ್ಲಿ ಮೃತಪಟ್ಟರು.