ಕೋಝಿಕ್ಕೋಡ್: ಬೀದಿ ನಾಯಿಗಳ ದಾಳಿಯ ಭೀತಿಯಿಂದಾಗಿ ಕೋಝಿಕೋಡ್ ಜಿಲ್ಲೆಯ ಕೂತಲಿ ಪಂಚಾಯತ್‍ನ ಏಳು ಶಾಲೆಗಳು ಮತ್ತು 17 ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.
ಆಕ್ರಮಣಕಾರಿ ಶ್ವಾನಗಳ ಭಯದಿಂದ ಉದ್ಯೋಗ ಖಾತ್ರಿ ಯೋಜನೆಯ ಭಾಗವಾಗಿ ಕಾಮಗಾರಿಯೂ ಸ್ಥಗಿತಗೊಂಡಿದೆ.
ಕೂತಲಿಯಲ್ಲಿ ಬೀದಿನಾಯಿಗಳ ಹಾವಳಿಯಿಂದ ಮಕ್ಕಳು ಮನೆಯಿಂದ ಹೊರಬರಲಾಗದೆ ಪರದಾಡುವಂತಾಗಿದೆ. ಸೋಮವಾರವೂ ನಾಲ್ಕು ಮಂದಿಗೆ ಬೀದಿ ನಾಯಿ ಕಚ್ಚಿರುವುದು ವರದಿಯಾಗಿದೆ. ಗಾಯಾಳುಗಳನ್ನು ಪೆರಂಬ್ರಾ ತಾಲೂಕು ಆಸ್ಪತ್ರೆ ಹಾಗೂ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಬೆಳಗ್ಗೆ ನಾಯಿಗಳು ದಾಳಿ ನಡೆಸಿವೆ.
ಕಳೆದ ಆಗಸ್ಟ್ ನಲ್ಲಿ ಬೀದಿನಾಯಿ ಕಚ್ಚಿ ಗೃಹಿಣಿಯೊಬ್ಬರು ಮೃತಪಟ್ಟಿದ್ದರು. ಮೃತ ಮಹಿಳೆ ಚಂದ್ರಿಕಾ ಎಂಬುವರು. ಆ ಬಳಿಕ ವ್ಯಾಪಕಗೊಳ್ಳುತ್ತಿರುವ ಬೀದಿನಾಯಿಗಳ ನಿಯಂತ್ರಣಕ್ಕೆ ಯಾರೂ ಮುಂದಾಗದಿರುವುದು ಅಚ್ಚರಿಗೂ ಕಾರಣವಾಗಿದೆ.