ಕಾಸರಗೋಡು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಬೇಕಲ ಸನಿಹದ ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಅಂಗವಾಗಿ ನಡೆಯುವ ಪಿತೃಬಲಿತರ್ಪಣ ಕಾರ್ಯಕ್ರಮ ಜುಲೈ 17ರಂದು ನಡೆಯಲಿರುವುದಾಗಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಬಾಬುರಾಜನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ ಉಷ:ಪೂಜೆಯೊಂದಿಗೆ 5.30ಕ್ಕೆ ಬಲಿತರ್ಪಣ ಕಾರ್ಯಕ್ರಮ ಆರಂಭಗೊಳ್ಳಲಿದೆ. ಪಿತೃತರ್ಪಣಕ್ಕಿರುವ ರಸೀದಿಗಳನ್ನು ದೇವಸ್ಥಾನ ವೆಬ್‍ಸೈಟ್ www.trikkannadtemple.in ಮೂಲಕವೂ ಆನ್‍ಲೈನ್‍ನಲ್ಲಿ ಪಡೆದುಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಅಂದು ಬೆಳಗ್ಗೆ 5 ಗಂಟೆಯಿಂದ ದೇವಸ್ಥಾನ ವಠಾರದ ಎಂಟು ಕೌಂಟ್‍ಗಳ ಮೂಲಕ ರಶೀದಿ ವಿತರಣೆ ಆರಂಭಗೊಳ್ಳಲಿದೆ. ಬೆಳಗ್ಗೆ ದೇವಸ್ಥಾನಕ್ಕೆ ತಲುಪುವ ಭಕ್ತಾದಿಗಳಿಗೆ ಆಹಾರ, ಪಾನೀಯ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಪಿತೃತರ್ಪಣಕ್ಕೆ ಆಗಮಿಸುವ ಭಕ್ತರಿಗೆ ಗರಿಷ್ಠ ನೆರವು ನೀಡಲು ಪೆÇಲೀಸರು, ಕೋಸ್ಟ್ ಗಾರ್ಡ್, ಆರೋಗ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ಚಂದ್ರಗಿರಿ ರೋವರ್ಸ್ ರೇಂಜರ್‍ಗಳು ಸಿದ್ಧರಾಗಿದ್ದಾರೆ. ಪ್ರಯಾಣ ಸಮಸ್ಯೆ ಪರಿಹಾರಕ್ಕಾಗಿ ಕಾಸರಗೋಡು-ಕಾಞಂಗಾಡ್ ಮಾರ್ಗದಲ್ಲಿ (ಚಂದ್ರಗಿರಿ ಸೇತುವೆ ಮೂಲಕ)ಹೆಚ್ಚಿನ ಬಸ್ ಸಂಚಾರ ನಡೆಸುವ ಬಗ್ಗೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ದೇವಸ್ಥಾನದ ಆಚರಣಾ ಸಮಿತಿ, ಮಾತೃ ಸಮಿತಿ ಮತ್ತು ಭಜನಾ ಸಮಿತಿಯ ಸೇವೆಯು ಭಕ್ತರಿಗೆ ಲಭ್ಯವಿರಲಿದೆ.
ಸಮಾರಂಭದ ಯಶಸ್ಸಿಗೆ ಕುಟುಂಬಶ್ರೀ, ಹಸಿರು ಕ್ರಿಯಾಸೇನೆ, ದೇವಸ್ಥಾನದ ಆಚರಣಾ ಸಮಿತಿ ಹಾಗೂ ಉದುಮ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಮಾತೃ ಸಮಿತಿ ಕಾರ್ಯಾಚರಿಸಲಿದೆ. ಪಿತೃತರ್ಪಣ ನಡೆಯುವ ಸಮುದ್ರ ಕರವಳಿಯನ್ನು ಶುಚಿಗೊಳಿಸಲಾಗಿದ್ದು, ಮಳೆಗಾಲದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಭಕ್ತಾದಿಗಳು ಜಾಗ್ರತೆ ಪಾಲಿಸುವಂತೆ ಮನವಿ ಮಾಡಲಾಗಿದೆ ಎಂದೂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ವಲ್ಲಿಯೋಡನ್ ಬಾಲಕೃಷ್ಣನ್ ನಾಯರ್, ಪರಂಪರಾಗತ ಟ್ರಸ್ಟಿ ಸದಸ್ಯ ಮೇಲೆಟ್ ಸತ್ಯನಾಥನ್ ನಂಬಿಯಾರ್, ಟ್ರಸ್ಟಿ ಸರ್ಕಾರಿ ನಾಮನಿರ್ದೇಶಿತ ಸುಧಾಕರನ್ ಕೋಡರ್ಮಲ್ ಅಜಿತ್.ಸಿ.ಕಳನಾಡ್ ಉಪಸ್ಥಿತರಿದ್ದರು.