ನವದೆಹಲಿ: ಅಟ್ಟಾರಿ-ವಾಘಾ ಗಡಿಯ ಮೂಲಕ 18 ಪಾಕಿಸ್ತಾನಿ ಪ್ರಜೆಗಳನ್ನು ಭಾರತ ವಾಪಸ್ ಕಳುಹಿಸಿದೆ ಎಂದು ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಶುಕ್ರವಾರ ತಿಳಿಸಿದೆ. ತೀವ್ರ ಪ್ರಯತ್ನದ ಫಲವಾಗಿ ಪಾಕಿಸ್ತಾನಿ ಪ್ರಜೆಗಳು ತಮ್ಮ ಸ್ವದೇಶಕ್ಕೆ ಮರಳಿದ್ದಾರೆ ಎಂದು ಪಾಕ್ ಹೈಕಮಿಷನ್ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಾಕಿಸ್ತಾನ ಹೈಕಮೀಷನ್, ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನ್ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯ ಮತ್ತು ಭಾರತ ಸಹಕಾರದಿಂದ ಶುಕ್ರವಾರ ಭಾರತದಲ್ಲಿ ಜೈಲಿನಲ್ಲಿದ್ದ 18 ಪಾಕಿಸ್ತಾನಿ ಪ್ರಜೆಗಳನ್ನು ಅಟ್ಟಾರಿ-ವಾಘಾ ಗಡಿ ಮೂಲಕ ತಮ್ಮ ಸ್ವದೇಶಕ್ಕೆ ಕಳುಹಿಸಲಾಗಿದೆ. ಭಾರತದಲ್ಲಿ ಉಳಿದಿರುವ ಇತರ ಪಾಕಿಸ್ತಾನಿ ಕೈದಿಗಳನ್ನು ಶೀಘ್ರವಾಗಿ ವಾಪಸು ಕಳುಹಿಸಲು ನಮ್ಮ ಪ್ರಯತ್ನಗಳು ಮುಂದುವರೆಯುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು ಮೇ 19 ರಂದು ಇಪ್ಪತ್ತೆರಡು ಪಾಕ್ ಪ್ರಜೆಗಳನ್ನು ಸಹ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿತ್ತು. ಪಾಕಿಸ್ತಾನ ಕೂಡಾ ಸುಮಾರು 200 ಭಾರತೀಯ ಮೀನುಗಾರರನ್ನು ಜೂನ್ 3 ರಂದು ಬಿಡುಗಡೆ ಮಾಡಿತ್ತು.