ನವದೆಹಲಿ: ದೇಶದಲ್ಲಿ ಅಟ್ಟಹಾಸ ಮೆರೆದಿದ್ದ ಕೋವಿಡ್ ಸೋಂಕು ಇದೀಗ ದಾಖಲೆ ಮಟ್ಟಕ್ಕೆ ಕುಸಿದಿದ್ದು, ಕಳೆದ 24 ಗಂಟೆಯಲ್ಲಿ ದೇಶಾದ್ಯಂತ ಕೇವಲ 24 ಹೊಸ ಸೋಂಕು ಪ್ರಕರಣಹಗಳು ಮಾತ್ರ ದಾಖಲಾಗಿದೆ.
ಕಳೆದ 24 ಗಂಟೆಯಲ್ಲಿ 24 ಹೊಸ ಸೋಂಕ ಪ್ರಕರಣಗಳು ಮಾತ್ರ ವರದಿಯಾಗಿದ್ದು, ಇದು 2020ರ ಬಳಿಕ ದೇಶದಲ್ಲಿ ದಾಖಲಾದ ಅತ್ಯಂತ ಕನಿಷ್ಟ ಸೋಂಕು ಪ್ರಕರಣಗಳ ಸಂಖ್ಯೆ ಇದಾಗಿದೆ. ಒಟ್ಟಾರೆ ಕೋವಿಡ್ ಪ್ರಕರಣಗಳ ಸಂಖ್ಯೆ 4.49 ಕೋಟಿ (4,49,94,599) ರಷ್ಟಿದೆ. ಕೇರಳದಲ್ಲಿ 2020ರ ಜನವರಿಯಲ್ಲಿ ಕೋವಿಡ್ ವೈರಸ್‌ನ ಮೊದಲ ಪ್ರಕರಣ ವರದಿಯಾಗಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಇನ್ನು ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಗಣನೀಯ ಪ್ರಮಾಣ ಕುಸಿತವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,431ಕ್ಕೆ ಕುಸಿತವಾಗಿದೆ. ಅಂತೆಯೇ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 5,31,913ರಷ್ಟಿದೆ. ರಾಷ್ಟ್ರೀಯ COVID-19 ಚೇತರಿಕೆ ದರವು 98.81 ಪ್ರತಿಶತಕ್ಕೆ ಏರಿಕೆಯಾಗಿದ್ದು, ಸಾವಿನ ಪ್ರಮಾಣವು ಶೇಕಡಾ 1.18 ರಷ್ಟಿದೆ ಎಂದು ಆರೋಗ್ಯ ಸಚಿವಾಲಯದ ವೆಬ್‌ಸೈಟ್ ನಲ್ಲಿ ಮಾಹಿತಿ ನೀಡಿದೆ.
ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,44,61,255 ಕ್ಕೆ ಏರಿದ್ದು, ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.