ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಬಹುದಾದ ಶಾಸಕಾಂಗ ವ್ಯವಹಾರಗಳು ಮತ್ತು ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಕೇಂದ್ರ ಸರಕಾರ ಜು.19ರಂದು ಸರ್ವಪಕ್ಷ ಸಭೆಯನ್ನು ಕರೆದಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಲೋಕಸಭೆ ಮತ್ತು ರಾಜ್ಯಸಭೆಯ ರಾಜಕೀಯ ಪಕ್ಷಗಳ ನಾಯಕರಿಗೆ ಸಭೆಗೆ ಆಹ್ವಾನ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸಂಸತ್ತಿನ ಮುಂಗಾರು ಅಧಿವೇಶನ, 2023 ಜುಲೈ 20 ರಿಂದ ಆರಂಭವಾಗಿ ಆಗಸ್ಟ್ 11 ರವರೆಗೆ ನಡೆಯಲಿದ್ದು, ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರಗಳು ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಲು ಎಲ್ಲಾ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕೆಂದು ಹೇಳಿದ್ದಾರೆ.
ಮುಂಗಾರು ಅಧಿವೇಶನ ಕುರಿತು ಮಾಹಿತಿ ನೀಡಿದ್ದ ಕೇಂದ್ರ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು, ಆಗಸ್ಟ್ 11ರವರೆಗೆ 23 ದಿನಗಳಲ್ಲಿ 17 ಅಧಿವೇಶನಗಳನ್ನು ಹೊಂದಿದೆ. ಹಳೆಯ ಕಟ್ಟಡದಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದೆ ಎಂದು ಹೇಳಿದ್ದರು.