ನವದೆಹಲಿ: 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭ ಪುಲ್ ಭಂಗಶ್‌ನಲ್ಲಿ ನಡೆದ ಹತ್ಯೆ ಪ್ರಕರಣದ ಆರೋಪಿ, ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರ ಧ್ವನಿ ಮಾದರಿ ಪರೀಕ್ಷೆಯ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸಲ್ಲಿಸಲು ದೆಹಲಿ ಕೋರ್ಟ್, ಸಿಬಿಐಗೆ ಐದು ದಿನ ಅವಕಾಶ ಕಲ್ಪಿಸಿದೆ.

ಎಫ್‌ಎಸ್‌ಎಲ್ ಫಲಿತಾಂಶಕ್ಕೆ ಇನ್ನೂ ಕಾಯಲಾಗುತ್ತಿದೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ವರದಿ ಸಲ್ಲಿಸಿತು. ಆ ಬಳಿಕ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಧಿ ಗುಪ್ತಾ ಆನಂದ್ ಅವರು ಟೈಟ್ಲರ್ ವಿರುದ್ಧದ ದೋಷಾರೋಪ ಪಟ್ಟಿ ಕುರಿತ ವಿಚಾರಣೆಯನ್ನು ಜುಲೈ 26ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಿದರು.
ಇಂದಿರಾ ಗಾಂಧಿ ಹತ್ಯೆಯಾದ ಮರುದಿನ (1984 ನವೆಂಬರ್ 1) ದೆಹಲಿಯ ಆಜಾದ್ ಮಾರ್ಕೆಟ್ ಬಳಿಯಿರುವ ಗುರುದ್ವಾರಕ್ಕೆ ಬೆಂಕಿ ಹಚ್ಚಲಾಗಿತ್ತು. ಸ್ಥಳದಲ್ಲಿದ್ದ ಸಿಖ್ ಸಮುದಾಯಕ್ಕೆ ಸೇರಿದ ಮೂವರ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಜಗದೀಶ್ ಟೈಟ್ಲರ್ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಿಬಿಐ ಮೇ 20ರಂದು ನ್ಯಾಯಾಲಯಕ್ಕೆ ಸಲ್ಲಿಸಿತ್ತು.
'ಗುರುದ್ವಾರದ ಬಳಿ ನೆರೆದಿದ್ದ ಗುಂಪಿಗೆ ಜಗದೀಶ್ ಟೈಟ್ಲರ್ ಪ್ರಚೋದನೆ ನೀಡಿದ್ದರು. ಪ್ರಚೋದಿತ ಗುಂಪು ಗುರುದ್ವಾರಕ್ಕೆ ಬೆಂಕಿಯಿಟ್ಟು ಸುಟ್ಟು ಹಾಕಿತ್ತು. ಅಲ್ಲಿದ್ದ ಸಿಖ್ ಸಮುದಾಯಕ್ಕೆ ಸೇರಿದ್ದ ಠಾಕೂರ್ ಸಿಂಗ್, ಬಾದಲ್ ಸಿಂಗ್ ಮತ್ತು ಗುರು ಚರಣ್ ಸಿಂಗ್ ಅವರನ್ನು ಹತ್ಯೆ ಮಾಡಲಾಯಿತು' ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಜಗದೀಶ್ ಟೈಟ್ಲರ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 147 (ಗಲಭೆ), 109 (ಕುಮ್ಮಕ್ಕು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಹೇಳಿದೆ.