ನೋಯ್ಡಾ: ಸರ್ಕಾರಕ್ಕೆ ಆದಾಯ ನಷ್ಟ ಉಂಟು ಮಾಡಿದ ಬಹುಕೋಟಿ ಜಿಎಸ್‌ಟಿ ಹಗರಣಕ್ಕೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ಸೋಮವಾರ ಮತ್ತೆ ಮೂವರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಗರಣವು ನಕಲಿ ಆಧಾರ್ ಕಾರ್ಡ್‌ಗಳ ಆಧಾರದ ಮೇಲೆ ಸಾವಿರಾರು ಬೋಗಸ್ ಕಂಪನಿಗಳನ್ನು ಸೃಷ್ಟಿಸಿ, ಅದರಿಂದ ನಕಲಿ ಇನ್‌ವಾಯ್ಸ್‌ಗಳನ್ನು ಸಿದ್ಧಪಡಿಸಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್(ಐಟಿಸಿ) ಕ್ಲೈಮ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಸೆಕ್ಟರ್ 20 ಪೊಲೀಸ್ ಠಾಣೆಯು ಜಿಎಸ್‌ಟಿ ವಂಚನೆ ಕುರಿತು ತನಿಖೆ ನಡೆಸುತ್ತಿದೆ. ಪೊಲೀಸರು ಈ ಪ್ರಕರಣದಲ್ಲಿ ಬೇಕಾಗಿದ್ದ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಮಿತ್ ಅಲಿಯಾಸ್ ಮಾಂಟಿ (42), ಅಜಯ್ ಅಲಿಯಾಸ್ ಮಿಂಟು(41) ಮತ್ತು ಮಹೇಶ್ ಎಂದು ಗುರುತಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ(ನೋಯ್ಡಾ) ಶಕ್ತಿ ಮೋಹನ್ ಅವಸ್ತಿ ಅವರು ಹೇಳಿದ್ದಾರೆ.
ಈ ಮೂವರು ಆರೋಪಿಗಳು ಹರಿಯಾಣದ ಸಿರ್ಸಾದಲ್ಲಿ ವಾಸವಾಗಿದ್ದು, ಕಳೆದ ಐದು ವರ್ಷಗಳಿಂದ ವಂಚಕರ ಗ್ಯಾಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳು ನಕಲಿ ಜಿಎಸ್‌ಟಿ ಬಿಲ್‌ಗಳಿಂದ ಪಡೆದ ಹಣವನ್ನು ಸಂಗ್ರಹಿಸುವುದು ಮತ್ತು ಅದನ್ನು ವರ್ಗಾವಣೆ ಮಾಡುತ್ತಿದ್ದರು. ಅವರು ಸಂಪೂರ್ಣ ಎನ್‌ಸಿಆರ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ವಹಿವಾಟು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ನೋಯ್ಡಾ ಪೊಲೀಸರು ಈ 'ಜಿಎಸ್‌ಟಿ ಹಗರಣ'ವನ್ನು ಭೇದಿಸಿದ್ದರು, ಇದರಲ್ಲಿ ಸುಮಾರು 3,077 ನಕಲಿ ಕಂಪನಿಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಈ ನಕಲಿ ಸಂಸ್ಥೆಗಳಿಂದ ಸುಮಾರು 8,500 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಪ್ರಾಥಮಿಕತನಿಖೆಯಿಂದ ತಿಳಿದು ಬಂದಿದೆ.