ಕೋಲ್ಕತ್ತ: ಪಶ್ಚಿಮ ಬಂಗಾಳದ ಪಂಚಾಯತಿ ಚುನಾವಣೆ ಸನ್ನಿಹಿತವಾಗುತ್ತಿರುವ ಬೆನ್ನಲ್ಲೇ, ಹಲವೆಡೆ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯದ ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿ ಪಟ್ಟಣದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರೊಬ್ಬರನ್ನು ಶನಿವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಎಂಸಿ ಕಾರ್ಯಕರ್ತ ಜಿಯಾರುಲ್ ಮೊಲ್ಲ (52) ಅವರು ಮನೆಗೆ ಮರಳುತ್ತಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೊಲ್ಲ ಮಗಳು ಮನ್ವಾರಾ ಅವರು ಕಥಾಲ್‌ಬರಿಯಾ ಗ್ರಾಮದಿಂದ ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ರಾಜಕೀಯ ತೊರೆಯುವಂತೆ ತಮ್ಮ ತಂದೆಗೆ ಪಕ್ಷದಲ್ಲಿದ್ದ ಮತ್ತೊಂದು ಬಣವು ಬೆದರಿಕೆ ಒಡ್ಡುತ್ತಿದ್ದದ್ದಾಗಿ ಮತ್ತು ಬೆದರಿಕೆ ಕುರಿತು ಹಲವಾರಿ ಬಾರಿ ದೂರು ನೀಡಿದ್ದ ಹೊರತಾಗಿಯೂ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ಎಂದು ಮನ್ವಾರಾ ಆರೋಪಿಸಿದ್ದಾರೆ.
'ನಾನು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು. ನನ್ನ ಸ್ಪರ್ಧೆಯನ್ನು ಪಕ್ಷದ ಮತ್ತೊಂದು ಬಣವು ವಿರೋಧಿಸಿತ್ತು. ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇನೆ' ಎಂದು ಮನ್ವಾರಾ ಹೇಳಿದ್ದಾರೆ.
10 ಜನರಿಗೆ ಗಾಯ: ಸಿಪಿಎಂ, ಇಂಡಿಯನ್ ಸೆಕ್ಸುಲರ್ ಫ್ರಂಟ್(ಐಎಸ್‌ಪಿ) ಬೆಂಬಲಿಗರು ಮತ್ತು ಟಿಎಂಸಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿ 10 ಜನ ಗಾಯಗೊಂಡಿರುವ ಘಟನೆಯು ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಕೃಷ್ಣಪುರ ಪ್ರದೇಶದಲ್ಲಿ ಟಿಎಂಸಿ ಸದಸ್ಯರು ಪಕ್ಷದ ಧ್ವಜಗಳನ್ನು ನಿಲ್ಲಿಸುತ್ತಿದ್ದ ವೇಳೆ ವಿರೋಧ ಪಕ್ಷಗಳ ಕಾರ್ಯಕರ್ತರು ಅದನ್ನು ತಡೆಯಲು ಮುಂದಾದಾಗ ಗಲಭೆ ನಡೆದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ, ದಕ್ಷಿಣ 24 ಪರಗಣ ಜಿಲ್ಲೆಯ ಚಲ್ತಾಬೇರಿಯಾ ಗ್ರಾಮ ಪಂಚಾಯತಿಯ ಟಿಎಂಸಿ ಅಭ್ಯರ್ಥಿ ಇಬ್ರಾಹಿಮ್ ಮೊಲ್ಲ ಎಂಬುವವರ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಐಎಸ್‌ಎಫ್ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.
ಜುಲೈ 8ರಂದು ಪಶ್ಚಿಮ ಬಂಗಾಳದ ಪಂಚಾಯತಿ ಚುನಾವಣೆ ನಡೆಯಲಿದೆ. ಚುನಾವಣೆಗೆ ಸಂಬಂಧಿಸಿದ ವಿವಿಧ ಘರ್ಷಣೆಗಳಲ್ಲಿ ಈವರೆಗೂ 10 ಜನರ ಹತ್ಯೆಗೀಡಾಗಿದ್ದಾರೆ.