ನವದೆಹಲಿ: ನಿರಂತರ ಮಳೆಯಿಂದಾಗಿ ಸರಬರಾಜಿಗೆ ಅಡ್ಡಿಯುಂಟಾದ ಕಾರಣ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಕೆಜಿ 200 ರೂ.ಗೆ ತಲುಪಿದೆ. ಟೊಮೆಟೊ ಮಾತ್ರವಲ್ಲದೇ ಇತರ ತರಕಾರಿಗಳ ದರ ಕೂಡಾ ದುಬಾರಿಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಟೊಮೊಟೊ ಉತ್ಪಾದಿಸುವ ಪ್ರದೇಶ ಭಾರಿ ಮಳೆಯಿಂದ ಜಲಾವೃತಗೊಂಡು ಬೆಳೆ ಹಾನಿಯಾಗಿದೆ. ಇಲ್ಲದೆ ಮಣ್ಣಿನ ಕೆಳಗೆ ಬೆಳೆಯುವ ಈರುಳ್ಳಿ ಮತ್ತು ಶುಂಠಿಯಂತಹ ತರಕಾರಿ ಕೂಡಾ ನಾಶವಾಗಿರುವುದಾಗಿ ಅವರು ಹೇಳಿದ್ದಾರೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸೋಮವಾರದಂದು ದೇಶಾದ್ಯಂತ ಟೊಮೊಟೊ ಸರಾಸರಿ ಬೆಲೆ ಕೆಜಿಗೆ 104.38 ರಷ್ಟಿತ್ತು. ಸ್ವೈ ಮಾಧೋಪುರದಲ್ಲಿ ಗರಿಷ್ಠ ಕೆಜಿಗೆ ರೂ. 200 ಇದ್ದರೆ, ರಾಜಸ್ಥಾನದ ಚುರುನಲ್ಲಿ ಕೆಜಿಗೆ 31 ರೂ. ಇತ್ತು. ಇನ್ನೂ ಮಹಾನಗರಗಳ ಪೈಕಿ ಕೋಲ್ಕತ್ತಾದಲ್ಲಿ ಕೆಜಿಗೆ 149 ರೂ. ಮುಂಬೈನಲ್ಲಿ 135, ಚೆನ್ನೈನಲ್ಲಿ ರೂ. 123 ಮತ್ತು ದೆಹಲಿಯಲ್ಲಿ ರೂ. 100 ಇತ್ತೆಂದು ಅಂಕಿಅಂಶಗಳಿಂದ ತಿಳಿದುಬಂದಿದೆ.
ಟೊಮ್ಯಾಟೊ ಮತ್ತಿತರ ತರಕಾರಿಗಳ ಚಿಲ್ಲರೆ ಮಾರುಕಟ್ಟೆ ಬೆಲೆಯು ಅದರ ಗುಣಮಟ್ಟ ಮತ್ತು ಅವುಗಳನ್ನು ಮಾರಾಟ ಮಾಡುವ ಸ್ಥಳವನ್ನು ಅವಲಂಬಿಸಿ ಬದಲಾಗುತ್ತದೆ. 'ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೆಹಲಿಯಲ್ಲಿ ಟೊಮೆಟೊ ಪೂರೈಕೆಯಲ್ಲಿ ಮತ್ತಷ್ಟು ವ್ಯತ್ಯಯ ಉಂಟಾಗಿದೆ. ಭಾರೀ ಮಳೆ ಮುಂದುವರಿದರೆ, ಶೀಘ್ರದಲ್ಲೇ ಬೆಲೆ ಕಡಿಮೆಯಾಗುವ ಸಾಧ್ಯತೆಯಿಲ್ಲ ಎಂದು ಆಜಾದ್‌ಪುರ ಟೊಮೇಟೊ ಅಸೋಸಿಯೇಷನ್ ಅಧ್ಯಕ್ಷ ಮತ್ತು ಆಜಾದ್‌ಪುರ ಮಂಡಿ ಸದಸ್ಯ ಅಶೋಕ್ ಕೌಶಿಕ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಪ್ರಸ್ತುತ ಬೇಡಿಕೆಯನ್ನು ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಿಂದ ಪೂರೈಸಲಾಗುತ್ತಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ಹೆಚ್ಚಿನ ತರಕಾರಿಗಳ ಬೆಲೆ ಸ್ಥಿರವಾಗಿರುತ್ತವೆ ಏಕೆಂದರೆ ಕೆಲವು ಬೆಳೆಗಳು ನೀರಿನಿಂದಾಗಿ ಹಾನಿಗೊಳಗಾಗುತ್ತವೆ ಎಂದು ಕೌಶಿಕ್ ಹೇಳಿದ್ದಾರೆ. ದೆಹಲಿಯಲ್ಲಿ ಕೆಲವರು ಟೊಮೆಟೊವನ್ನು ಕೆಜಿಗೆ 200 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ಫ್ರೆಂಚ್ ಬೀನ್ಸ್, ಹೂಕೋಸು, ಎಲೆಕೋಸು ಮತ್ತು ಶುಂಠಿಯಂತಹ ಇತರ ತರಕಾರಿಗಳ ಜೊತೆಗೆ ಈರುಳ್ಳಿ ಮತ್ತು ಆಲೂಗಡ್ಡೆಗಳ ಚಿಲ್ಲರೆ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದು ಪಶ್ಚಿಮ ವಿಹಾರ್‌ನ ಸ್ಥಳೀಯ ಮಾರಾಟಗಾರ ಜ್ಯೋತಿಶ್ ಝಾ ಹೇಳಿದರು.
ಹೆಚ್ಚಿನ ತರಕಾರಿಗಳು ಕೆಜಿಗೆ 60 ರೂ.ಗಿಂತ ಕಡಿಮೆಯಿಲ್ಲ. ಉದಾಹರಣೆಗೆ ಹಾಗಲಕಾಯಿ, ಬಾಟಲ್ ಸೋರೆಕಾಯಿ ಮತ್ತು ಸೌತೆಕಾಯಿ ಪ್ರತಿ ಕೆಜಿಗೆ 60 ರೂ. ಮತ್ತು ಹೂಕೋಸು ಕೆಜಿಗೆ 180 ರೂ.ಗೆ ಮಾರಾಟವಾಗಿದೆ ಎಂದು ವ್ಯಾಪಾರದ ಅಂಕಿಅಂಶಗಳು ತೋರಿಸುತ್ತವೆ. ಕಳೆದ ಹದಿನೈದು ದಿನಗಳಲ್ಲಿ ಶುಂಠಿ ಬೆಲೆ ಕೆಜಿಗೆ 240 ರೂ.ನಿಂದ 300 ರೂ.ಗೆ ಏರಿಕೆಯಾಗಿದೆ. ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ.