ನವದೆಹಲಿ: ಭಾರತದಾದ್ಯಂತ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ(ಪಿಎಂಬಿಜೆಕೆ) ಔಷಧಿಗಳ ಮಾರಾಟವು 2022-23ರ ಆರ್ಥಿಕ ವರ್ಷದಲ್ಲಿ 1236.17 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ಶೇ.38ರಷ್ಟು ಏರಿಕೆಯಾಗಿದೆ. 2021-22 ಹಣಕಾಸು ವರ್ಷದಲ್ಲಿ ಪಿಎಂಬಿಜೆಕೆಯಲ್ಲಿ 893.56 ಕೋಟಿ ರೂಪಾಯಿ ಮಾರಾಟವಾಗಿತ್ತು.
ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು ಒದಗಿಸಿದ ಮಾಹಿತಿಯ ಪ್ರಕಾರ, ಜೂನ್ 30ರವರೆಗೆ ದೇಶಾದ್ಯಂತ 9,512 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. 2024ರ ಮಾರ್ಚ್ ನೊಳಗೆ 10,000 ಜನೌಷಧಗಳನ್ನು ತೆರೆಯುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
1,349 ಜನೌಷಧಿ ಕೇಂದ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ 1,084, ಕೇರಳ 979 ಮತ್ತು ತಮಿಳುನಾಡಿನಲ್ಲಿ 910 ಕೇಂದ್ರಗಳಿವೆ. 2008ರ ನವೆಂಬರ್ ನಲ್ಲಿ ಪ್ರಾರಂಭವಾದ ಈ ಯೋಜನೆಯು 1,759 ಔಷಧಿಗಳನ್ನು ಮತ್ತು 280 ಶಸ್ತ್ರಚಿಕಿತ್ಸಾ ಸಾಧನಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ.
2023-24ನೇ ಹಣಕಾಸು ವರ್ಷದಲ್ಲಿ ಯೋಜನೆಗೆ 115 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಅದರಲ್ಲಿ ರೂ.28.54 ಕೋಟಿ ಮಂಜೂರು ಮಾಡಲಾಗಿತ್ತು. ಜೂನ್ 30ರವರೆಗೆ ರೂ.17.61 ಕೋಟಿ ಬಳಸಿಕೊಳ್ಳಲಾಗಿದೆ ಎಂದು ಖೂಬಾ ತಿಳಿಸಿದರು.
ಇದಲ್ಲದೆ, NITI ಆಯೋಗದಿಂದ ಈಶಾನ್ಯ ರಾಜ್ಯಗಳು, ಹಿಮಾಲಯ ಪ್ರದೇಶಗಳು, ದ್ವೀಪ ಪ್ರದೇಶಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಎಂದು ನಮೂದಿಸಲಾದ ಅಥವಾ ಮಹಿಳಾ ಉದ್ಯಮಿಗಳು, ಮಾಜಿ ಸೈನಿಕರು, ದಿವ್ಯಾಂಗರು, ಎಸ್ಸಿ ಮತ್ತು ಎಸ್ಟಿಗಳು ತೆರೆಯಲಾದ ಜನೌಷಧಿ ಕೇಂದ್ರಗಳಿಗೆ ಒಂದು ಬಾರಿ 2 ಲಕ್ಷ ರೂ.ಗಳ ಪ್ರೋತ್ಸಾಹವನ್ನು ನೀಡಲಾಗುತ್ತದೆ ಎಂದರು.