ನವದೆಹಲಿ: ಹಸಿರುಮನೆ ಅನಿಲಗಳು ಪರಿಸರ ಸೇರುವುದನ್ನು ತಡೆಗಟ್ಟದಿದ್ದಲ್ಲಿ ಈ ಶತಮಾನದ ಮಧ್ಯಭಾಗದ ಹೊತ್ತಿಗೆ ಸಾಗರ ಪ್ರವಾಹಗಳು ಕುಸಿದು, ಸಂಕಷ್ಟ ಎದುರಾಗಲಿದೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.
ತಾಪಮಾನದ ಮರುವಿತರಣೆ, ಉಷ್ಣವಲಯ ಮತ್ತು ಉತ್ತರ ಅಟ್ಲಾಂಟಿಕ್ ಪ್ರದೇಶಗಳ ನಡುವೆ ಆವಿಯ ಸಾಂದ್ರೀಕರಣದಲ್ಲಿ ಸಾಗರ ಪ್ರವಾಹಗಳು ಮಹತ್ವದ ಪಾತ್ರ ವಹಿಸುತ್ತವೆ.
ಡೆನ್ಮಾರ್ಕ್‌ನ ಕೋಪನ್‌ಹೆಗನ್ ವಿಶ್ವವಿದ್ಯಾಲಯದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದು, 2057ರ ಹೊತ್ತಿಗೆ ಸಾಗರ ಪ್ರವಾಹಗಳು ಕುಸಿಯುವ ಸಾಧ್ಯತೆ ಹೆಚ್ಚು ಎಂದು ಅಂದಾಜಿಸಿದ್ದಾರೆ.
ಈ ವಿದ್ಯಮಾನದಿಂದಾಗಿ ಭವಿಷ್ಯದಲ್ಲಿ ಯುರೋಪ್‌ನಲ್ಲಿ ತಾಪಮಾನ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದೆ. ಉತ್ತರ ಅಟ್ಲಾಂಟಿಕ್‌ನ ವಾತಾವರಣ ಪ್ರಕ್ಷುಬ್ಧಗೊಳ್ಳಲಿದ್ದರೆ, ಉಷ್ಣವಲಯದಲ್ಲಿ ಬಿಸಿಲ ಧಗೆ ಮತ್ತಷ್ಟು ಹೆಚ್ಚಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
'ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಆದಷ್ಟು ಬೇಗನೆ ತಗ್ಗಿಸುವ ಅಗತ್ಯವನ್ನು ನಮ್ಮ ಅಧ್ಯಯನದಿಂದ ಪ್ರತಿಪಾದಿಸುತ್ತದೆ' ಎಂದು ಸಂಶೋಧನಾ ತಂಡದಲ್ಲಿದ್ದ ವಿಜ್ಞಾನಿ ಪೀಟರ್ ಡಿಟ್ಲೆವ್‌ಸೆನ್ ಹೇಳಿದ್ದಾರೆ.
'ಉತ್ತರ ಅಟ್ಲಾಂಟಿಕ್‌ನ ನಿರ್ದಿಷ್ಟ ಪ್ರದೇಶದಲ್ಲಿ 1870ರಿಂದ ಈ ವರೆಗೆ ದಾಖಲಾಗಿರುವ ತಾಪಮಾನಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ವಿಶ್ಲೇಷಿಸುವ ಜೊತೆಗೆ, ಭಿನ್ನ ಮಾನದಂಡಗಳನ್ನು ಆಧರಿಸಿ ನಡೆಸಿದ ಅಧ್ಯಯನದಿಂದ ಈ ನಿರ್ಧಾರಕ್ಕೆ ಬರಲಾಗಿದೆ' ಎಂದು ಹೇಳಿದ್ದಾರೆ.
ಈ ಶತಮಾನದಲ್ಲಿ ಸಾಗರ ಪ್ರವಾಹಗಳಲ್ಲಿ ಹಠಾತ್ ಬದಲಾವಣೆ ಕಂಡುಬರುವುದಿಲ್ಲ ಎಂದು ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಸಮಿತಿ (ಐಪಿಸಿಸಿ) ಇತ್ತೀಚೆಗೆ ತನ್ನ ವರದಿಯಲ್ಲಿ ಹೇಳಿತ್ತು. ಆದರೆ, ಡೆನ್ಮಾರ್ಕ್‌ನ ಸಂಶೋಧಕರ ತಂಡದ ವಿಶ್ಲೇಷಣೆಯು ಐಪಿಸಿಸಿ ವರದಿಗೆ ವಿರುದ್ಧವಾಗಿರುವುದು ಗಮನಾರ್ಹ.