ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಿದ್ದ 20 ವಿಪಕ್ಷ ಸಂಸದರ ನಿಯೋಗ, ಅಲ್ಲಿನ ರಾಜ್ಯಪಾಲರಾದ ಅನುಸೂಯ ಉಯಿಕೆಯವರನ್ನು ಭೇಟಿ ಮಾಡಿ ಅವಲೋಕನ ಕುರಿತ ಜ್ಞಾಪನಾಪತ್ರವನ್ನು ಭಾನುವಾರ ಸಲ್ಲಿಸಿದ್ದಾರೆ.
ಪರಿಶಿಷ್ಟ ಪಂಗಡದ ಸ್ಥಾನಮಾನ ಕುರಿತಂತೆ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಘರ್ಷಣೆಗಳು ನಡೆದ ನಂತರ ನಡೆಯುತ್ತಿರುವ ಹಿಂಸಾಚಾರ ತಡೆಯುವ ಕುರಿತಂತೆ ನಾಯಕರು ಚರ್ಚೆ ನಡೆಸಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಅವರು, ‘ಇಂಡಿಯಾ ಮೈತ್ರಿಕೂಟದ ಸಂಸದರು ಮಣಿಪುರದ ರಾಜ್ಯಪಾಲರನ್ನು ಭೇಟಿಯಾಗಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಿದೆವು. ಎಲ್ಲರೂ ಒಟ್ಟಾಗಿ ಸಮಸ್ಯೆ ಪರಿಹರಿಸುವುದು ಅಗತ್ಯವಾಗಿದೆ ಎಂಬ ನಮ್ಮ ಮನವಿಯನ್ನು ಅವರು ಅಂಗೀಕರಿಸಿದರು.
ಸಮುದಾಯದ ನಡುವಿನ ಅಪನಂಬಿಕೆಯನ್ನು ಹೋಗಲಾಡಿಸಲು ಜನರೊಂದಿಗೆ ಚರ್ಚೆ ನಡೆಸುವ ದೃಷ್ಟಿಯಿಂದ ಸರ್ವಪಕ್ಷ ನಿಯೋಗ ಮಣಿಪುರಕ್ಕೆ ಭೇಟಿ ನೀಡಬೇಕು’ ಎಂದು ಹೇಳಿದರು. ಅಲ್ಲದೆ, ಇಲ್ಲಿನ ಅವಲೋಕನಗಳನ್ನು ಸಂಸತ್ತಿನಲ್ಲಿ ಮಂಡಿಸುವುದಾಗಿಯೂ ತಿಳಿಸಿದರು.
‘ದಿನದಿಂದ ದಿನಕ್ಕೆ ಹದಗೆಡುತ್ತಿರುವ ಮಣಿಪುರ ಪರಿಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ವಿನಂತಿಸಿದ್ದೇವೆ. ಮಣಿಪುರ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದಿದ್ದರೆ, ಅದು ದೇಶದ ಭದ್ರತೆಯ ಸಮಸ್ಯೆಯನ್ನು ಉಂಟುಮಾಡಬಹುದು’ ಎಂದು ಅಧೀರ್ ರಂಜನ್ ಕಳವಳ ವ್ಯಕ್ತಪಡಿಸಿದರು.
ನಿಯೋಗದಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯಿ, ಟಿಎಂಸಿಯ ಸುಶ್ಮಿತಾ ದೇವ್, ಜೆಎಂಎಂನ ಮಹುವಾ ಮಜ್ಹಿ, ಡಿಎಂಕೆಯ ಕನಿಮೋಳಿ, ಎನ್‌ಸಿಪಿಯ ವಂದನಾ ಚೌಹಾಣ್, ಆರ್‌ಎಲ್‌ಡಿಯ ಜಯಂತ್ ಚೌದರಿ, ಆರ್‌ಜೆಡಿಯ ಮನೋಜ್ ಕುಮಾರ್, ಆರ್‌ಎಸ್‌ಪಿಯ ಎನ್. ಕೆ ಪ್ರೇಮಚಂದ್ರನ್ ಮತ್ತು ವಿಸಿಕೆಯ ತಿರುಮಾವಳನ್ ಇದ್ದರು.
ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮಾನ್ಯತೆ ನೀಡುವುದಕ್ಕೆ ವಿರೋಧಿಸಿ ಕೆಲವು ಪಂಗಡಗಳು ಆಕ್ಷೇಪಿಸಿರುವುದು ರಾಜ್ಯದಲ್ಲಿ ಗಲಭೆಗೆ ಕಾರಣವಾಗಿದೆ.
ಏಪ್ರಿಲ್ 19ರಂದು ಮೈತೇಯಿ ಸಮುದಾಯವನ್ನು ಎಸ್‌ಟಿ ಪಟ್ಟಿಯಲ್ಲಿ ಒಂದು ತಿಂಗಳೊಳಗೆ ಸೇರ್ಪಡೆ ಮಾಡಲು ಮಣಿಪುರ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್ ನಿರ್ದೇಶಿಸಿತ್ತು. ಇದು ಬುಡಕಟ್ಟು ಮತ್ತು ಬುಡಕಟ್ಟೇತರ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಗಲಭೆಯ ನಡುವೆ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಲೈಂಗಿಕ ಕಿರುಕುಳ ನೀಡುತ್ತಾ ಅವರನ್ನು ಮೆರವಣಿಗೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆಯು ಮೇ 4ರಂದು ನಡೆದಿದ್ದು, ಉದ್ರಿಕ್ತರ ಗುಂಪು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ವರದಿಯಾಗಿತ್ತು.