ಭುವನೇಶ್ವರ: ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳೊಂದಿಗೆ ಇನ್ಮುಂದೆ ಇತರೆ 22 ಭಾಷೆಗಳಲ್ಲಿ ದೇಶದಾದ್ಯಂತ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಶಾಲೆಗಳಲ್ಲಿ ಬೋಧನೆ ಮಾಡಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇಲ್ಲಿಯವರೆಗೆ, ಸಿಬಿಎಸ್ಇ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಬೋಧನೆ ಮಾಡಲಾಗುತ್ತಿತ್ತು.
ಈ ಬಗ್ಗೆ ಸಿಬಿಎಸ್‌ಇ ಶುಕ್ರವಾರ ಸುತ್ತೋಲೆ ಹೊರಡಿಸಿದೆ. ಇಂಗ್ಲಿಷ್ ಮತ್ತು ಹಿಂದಿಯೊಂದಿಗೆ ಇತರ ಭಾಷೆಗಳಲ್ಲಿಯೂ ತಮ್ಮ ಅಡಿಯಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಬಹುದು ಎಂದು ಅನುಮತಿ ನೀಡಿದೆ. 1 ರಿಂದ 12ನೇ ತರಗತಿಯ ಹೊಸ ಬೋಧನಾ ಮಾಧ್ಯಮಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ನಿಬಂಧನೆಗಳ ಅಡಿಯಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು.
ತನ್ನ ಮಾತೃಭಾಷೆಯಲ್ಲಿ ಓದುವ ವಿದ್ಯಾರ್ಥಿಯು ಹಿಂದಿ ಅಥವಾ ಇಂಗ್ಲಿಷ್‌ಗಿಂತ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ. ಶಾಲೆಗಳು ಈ ಭಾಷೆಗಳಲ್ಲಿ ಅಧ್ಯಯನ ಮಾಡಲು ನಿಬಂಧನೆಗಳನ್ನು ಮಾಡುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲು NCERT ಅನ್ನು ಕೇಳಲಾಗಿದೆ. ಈ ಭಾಷೆಗಳಲ್ಲೂ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಪ್ರಧಾನ್ ಹೇಳಿದರು.
ತಮ್ಮ ಮಾತೃಭಾಷೆಯಲ್ಲಿ ಕಲಿಯುವುದರಿಂದ ಯಾವುದೇ ವಿಷಯದ ಬಗ್ಗೆ ಸ್ಪಷ್ಟತೆ ಪಡೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ. ಎನ್ಇಪಿ ಎಲ್ಲಾ ಭಾರತೀಯ ಭಾಷೆಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಪ್ರಧಾನ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.