ಶ್ರೀಹರಿಕೋಟಾ: 'ಚಂದ್ರಯಾನ-3'ರ 'ಸಾಫ್ಟ್ ಲ್ಯಾಂಡಿಂಗ್'ಅನ್ನು ಆಗಸ್ಟ್ 23ರ ಸಂಜೆ 5.47ಕ್ಕೆ ನೆರವೇರಿಸಲು ಯೋಜಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಎಸ್.ಸೋಮನಾಥ್ ಶುಕ್ರವಾರ ಹೇಳಿದರು.
'ಚಂದ್ರಯಾನ-3' ಉಡ್ಡಯನದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸಾಫ್ಟ್ ಲ್ಯಾಂಡಿಂಗ್ ತಾಂತ್ರಿಕವಾಗಿ ಬಹಳ ಸವಾಲಿನ ಕಾರ್ಯವಾಗಿದೆ' ಎಂದರು.
'ಗಗನನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯವನ್ನು ಆಗಸ್ಟ್ 1ರಿಂದ ಆರಂಭಿಸಲು ಯೋಜಿಸಲಾಗಿದೆ' ಎಂದು ಹೇಳಿದರು.
ಈ ಕಾರ್ಯಕ್ರಮದ ನಿರ್ದೇಶಕ ಎಸ್.ಮೋಹನಕುಮಾರ್,'ಎಲ್‌ವಿಎಂ3 ರಾಕೆಟ್ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ' ಎಂದು ಹೇಳಿದರು.
'ಪ್ರೊಪಲ್ಷನ್ ಮಾಡ್ಯೂಲ್ ಹಾಗೂ ಲ್ಯಾಂಡರ್ ಮಾಡ್ಯೂಲ್‌ನಲ್ಲಿ ವಿದ್ಯುತ್ ಉತ್ಪಾದನೆ ಸೇರಿದಂತೆ ಗಗನನೌಕೆ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಅಂಶಗಳು ಸುಸ್ಥಿತಿಯಲ್ಲಿವೆ' ಎಂದು ಯೋಜನಾ ನಿರ್ದೇಶಕ ಪಿ.ವೀರಮುತ್ತುವೇಲು ಹೇಳಿದರು.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, 'ಚಂದ್ರಯಾನ-3ಕ್ಕೆ ಅಂದಾಜು ₹ 600 ಕೋಟಿ ವೆಚ್ಚವಾಗಿದೆ' ಎಂದು ಹೇಳಿದರು.
'ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದೇ ಕರೆಯಲಾಗುವ ದಿವಂಗತ ವಿಕ್ರಮ್ ಸಾರಾಭಾಯಿ ಅವರು ಆರು ದಶಕಗಳ ಹಿಂದೆ ಇಂಥ ಆಕಾಶಯಾನ ಕನಸ ಕಂಡಿದ್ದರು. ಅವರ ಕನಸು ಈ ದಿನ ಸಾಕಾರಗೊಂಡಂತಾಗಿದೆ' ಎಂದರು.

'ಇಂತಹ ಯೋಜನೆ ಅನುಷ್ಠಾನಕ್ಕೆ ಆಗ ಸಾರಾಭಾಯಿ ಅವರಿಗೆ ಹಣಕಾಸಿನ ಕೊರತೆ ಇದ್ದಿರಬಹುದು, ಆದರೆ, ಅವರಲ್ಲಿ ಆತ್ಮವಿಶ್ವಾಸ, ದೂರದೃಷ್ಟಿಗೆ ಕೊರತೆ ಇರಲಿಲ್ಲ' ಎಂದು ಸ್ಮರಿಸಿದರು.
