ಕಾಸರಗೋಡು: ಜಿಲ್ಲೆಯಲ್ಲಿ ಮಳೆ ಮತ್ತೆ ಬಿರುಸುಪಡೆದುಕೊಳ್ಳಲಾರಂಭಿಸಿದೆ. ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜುಲೈ 23ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24ತಾಸುಗಳೊಳಗೆ ಜಿಲ್ಲೆಯಲ್ಲಿ 64.5ಮಿ.ಮೀನಿಂದ ತೊಡಗಿ 115.5ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರ ಬೆಳಗ್ಗಿನಿಂದ ಗಾಳಿಯಿಂದ ಕೂಡಿದ ಮಳೆಯಾಗುತ್ತಿದೆ. ಮಲೆನಾಡು ಪ್ರದೇಶದಲ್ಲೂ ಬಿರುಸಿನ ಮಳೆಯಾಗುತ್ತಿದ್ದು, ವಿವಿಧೆಡೆ ಭೂಕುಸಿತ ಸೇರಿದಂತೆ ಪ್ರಾಕೃತಿಕ ವಿಕೋಪದಿಂದ ಹಾನಿಯುಂಟಾಗಿದೆ. ಪಾಣತ್ತೂರಿನಿಂದ ಕಲ್ಲಪಳ್ಳಿ ಹಾದಿಯಾಗಿ ಸುಳ್ಯ ಸಂಚರಿಸುವ ರಸ್ತೆ ಬಾಟೋಳಿ ಎಂಬಲ್ಲಿ ಭೂಕುಸಿತದಿಂದ ರಸ್ತೆಯಲ್ಲಿ ಬೃಹತ್ ಮರ ಸೇರಿದಂತೆ ಭಾರಿ ಪ್ರಮಾಣದಲ್ಲಿ ಮಣ್ಣು ತುಂಬಿಕೊಂಡಿದ್ದು, ವಾಹನ ಸಂಚರಕ್ಕೆ ಅಡಚಣೆಯುಂಟಾಗಿದೆ.