ಬದಿಯಡ್ಕ: ಸಾಧನೆಗೆ ಜಡ ಅಡ್ಡಿಯಾಗುತ್ತದೆ. ಜಡವನ್ನು ಬಿಟ್ಟು ಎದ್ದರೆ ನಮಗೆ ಸಾಧಿಸಲು ಅಸಾಧ್ಯವಾದುದು ಇಲ್ಲ. ಕಷ್ಟ ಪಡದೆ ಫಲಸಿಗುವುದು ಅಸಾಧ್ಯ ಏಕಾಗ್ರತೆ, ಗುರಿ, ಶ್ರಮ, ಶಿಸ್ತು ಇವುಗಳು ಮೇಳವಿಸಿದಾಗ ಉನ್ನತ ವಿಜಯ ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲ ಯತೀಶ್ ಕುಮಾರ್ ರೈ ಹೇಳಿದರು.
ಅವರು ಆಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರೀ ಶಾಲೆಯಲ್ಲಿ ನಡೆದ ಪ್ಲಸ್ ಟು ವಿದ್ಯಾರ್ಥಿಗಳ 'ಪ್ರತಿಭಾ ಪುರಸ್ಕಾರ- 23' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಿ.ಟಿ.ಎ ಅಧ್ಯಕ್ಷ ರಮೇಶ ಪದ್ಮಾರ್ ವಿದ್ಯಾರ್ಥಿಗಳ ಪ್ರತಿಭೆಗೆ ಲಭಿಸುವ ಪುರಸ್ಕಾರ ಅವರ ಮುಂದಿನ ಜೀವನದ ಸಾಧನೆಗೆ ಪ್ರೇರಣೆ ಎಂದು ಹೇಳಿದರು.
ಶಾಲೆಯ ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪದವು, ಮುಖ್ಯೋಪಾಧ್ಯಾಯ ಗಿರೀಶ, ಎಸ್ ಎಂ ಸಿ ಅಧ್ಯಕ್ಷ ಕೃಷ್ಣ ಡಿ, ನಿವೃತ್ತ ಸೇನಾನಿ ಹಾಗೂ ವಿದ್ಯಾಭಿಮಾನಿ ಬಾಲಚಂದ್ರ ಕೇಕುಣ್ಣಾಯ ಹಾಗೂ ಅಧ್ಯಾಪಕ ವಿನೋದ್ ಕುಮಾರ್ ಈ ಸಂದರ್ಭ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಳೆದ ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದ ಹಾಗೂ ತೊಂಬತ್ತು ಶೇಕಡಾಕ್ಕಿಂತ ಅಧಿಕ ಅಂಕ ಪಡೆದ ಮೂವತ್ತೊಂದು ಮಂದಿ ವಿದ್ಯಾರ್ಥಿಗಳಿಗೆ ಸ್ಟಾಫ್ ಕೌನ್ಸಿಲ್ ಹಾಗೂ ಪಿ.ಟಿ.ಎ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ನಿವೃತ್ತ ಸೇನಾನಿ ಹಾಗೂ ವಿದ್ಯಾಭಿಮಾನಿ ಬಾಲಚಂದ್ರ ಕೇಕುಣ್ಣಾಯ ಅವರು ಪ್ರತಿವರ್ಷ ಎ ಪ್ಲಸ್ ಪಡೆದ ವಿದ್ಯಾರ್ಥಿಗಳಿಗೆ ತಾವು ನೀಡುತ್ತಿರುವ ಬಹುಮಾನವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿ ಪ್ರೋತ್ಸಾಹಿಸಿದರು. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಅತ್ಯಧಿಕ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಉಪ್ಪಂಗಳ ಟ್ರಸ್ಟ್ ಜಯನಗರ ಹಾಗೂ ರಕ್ಷಾ ಆರ್ ಸಿ ಸಿ ನಾರಂಪಾಡಿ ಇಲ್ಲಿಯ ವಿಠ್ಠಲ ರಾಜ್ ಪ್ರತಿ ವರ್ಷ ನೀಡುತ್ತಿರುವ ನಗದು ಬಹುಮಾನವನ್ನು ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪ್ರಾಂಶುಪಾಲ ಸತೀಶ ವೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಧ್ಯಾಪಿಕೆ ರೇಖಾ ಡಿ ಸ್ವಾಗತಿಸಿ, ಅಧ್ಯಾಪಕ ಗಣೇಶ ಪಿ ಎಸ್ ವಂದಿಸಿದರು. ಅಧ್ಯಾಪಕ ಬಾಲಚಂದ್ರನ್ ಕಾರ್ಯಕ್ರಮ ನಿರೂಪಿಸಿದರು.