ನವದೆಹಲಿ: ರಕ್ಷಣಾ ಸಹಕಾರವು ಭಾರತ-ಫ್ರಾನ್ಸ್ ಬಾಂಧವ್ಯದ ಆಧಾರಸ್ತಂಭವಾಗಿ ಉಳಿದಿದೆ ಎಂದು ಒತ್ತಿಹೇಳುವ ಭಾರತ ಮತ್ತು ಫ್ರಾನ್ಸ್ ನಿನ್ನೆ ಶುಕ್ರವಾರ ಜೆಟ್ ಮತ್ತು ಹೆಲಿಕಾಪ್ಟರ್ ಎಂಜಿನ್‌ಗಳ ಜಂಟಿ ಅಭಿವೃದ್ಧಿ ಮತ್ತು ಭಾರತೀಯ ನೌಕಾಪಡೆಗಾಗಿ ಮೂರು ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಬಗ್ಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಘೋಷಿಸಿವೆ.
ಪ್ರಧಾನಿ ನರೇಂದ್ರ ಮೋದಿ(PM Narendra Modi) ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್(Emmanuel Macron) ನಡುವಿನ ವ್ಯಾಪಕ ಮಾತುಕತೆಯ ನಂತರ ಈ ಘೋಷಣೆಗಳನ್ನು ಮಾಡಲಾಗಿದೆ.
ಆದರೆ ನಾಯಕರ ಮಾತುಕತೆ ವೇಳೆ 26 ನೌಕಾಪಡೆಯ ರಫೇಲ್ ಯುದ್ಧವಿಮಾನಗಳ ಖರೀದಿಯ ಬಗ್ಗೆ ಪ್ರಸ್ತಾಪವಾಗಿಲ್ಲ. ಮುಂದಿನ 25 ವರ್ಷಗಳಲ್ಲಿ ಕಾರ್ಯತಂತ್ರದ ಸಹಕಾರವನ್ನು ಬಲಪಡಿಸಲು ಉಭಯ ದೇಶಗಳು 'ದಟ್ಟ ಮತ್ತು ಮಹತ್ವಾಕಾಂಕ್ಷೆಯ' ಗುರಿಗಳನ್ನು ಹೊಂದಿವೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದ್ದಾರೆ. (India-Japan)
ಪ್ರಧಾನಿ ಮೋದಿ ಹೇಳಿದ್ದೇನು?: ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಕಳೆದ 25 ವರ್ಷಗಳ ಭದ್ರ ಬುನಾದಿಯ ಮೇಲೆ ಮುಂಬರುವ 25 ವರ್ಷಗಳ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದ್ದೇವೆ. ಇದಕ್ಕಾಗಿ ನಾವು ದಿಟ್ಟ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದೇವೆ ಎಂದು ಮೋದಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾರ್ಸೆಲ್ಲೆಸ್‌ನಲ್ಲಿ ಹೊಸ ಭಾರತೀಯ ದೂತಾವಾಸವನ್ನು ತೆರೆಯಲಾಗುವುದು ಎಂದು ಮೋದಿ ಘೋಷಿಸಿದ್ದಾರೆ. ಜಂಟಿ ಹೇಳಿಕೆಯಲ್ಲಿ, ಮಾರ್ಕನ್ ಭಾರತ ಮತ್ತು ಫ್ರಾನ್ಸ್ ನಡುವಿನ ರಕ್ಷಣಾ ಸಂಬಂಧಗಳನ್ನು ಮತ್ತು ಭಾರತೀಯ ಸೈನಿಕರು ಫ್ರೆಂಚ್‌ಗಾಗಿ ಹೇಗೆ ಹೋರಾಡಿದರು ಎಂಬುದನ್ನು ಎತ್ತಿ ತೋರಿಸಿದರು. 2030ರ ವೇಳೆಗೆ 30,000 ಫ್ರೆಂಚ್ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಂಗ ಮಾಡಲಿದ್ದಾರೆ ಎಂದ ಅವರು, ಭಾರತೀಯ ವಿದ್ಯಾರ್ಥಿಗಳು ಫ್ರಾನ್ಸ್‌ಗೆ ಬಂದು ಅಧ್ಯಯನ ಮಾಡಲು ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು ಎಂದು ಹೇಳಿದರು.
ಮೊನ್ನೆ ಗುರುವಾರ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಅನ್ನು ಮೋದಿ ಅವರಿಗೆ ನೀಡಲಾಯಿತು, ಅಸ್ಕರ್ ಗೌರವವನ್ನು ಪಡೆದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗೌರವ ಸ್ವೀಕರಿಸಿದ ಇತರ ಗಣ್ಯರಲ್ಲಿ ನೆಲ್ಸನ್ ಮಂಡೇಲಾ, ಕಿಂಗ್ ಚಾರ್ಲ್ಸ್ ಮತ್ತು ಏಂಜೆಲಾ ಮರ್ಕೆಲ್ ಸೇರಿದ್ದಾರೆ.
ಸೌಹಾರ್ದಯುತ ತೃತೀಯ ರಾಷ್ಟ್ರಗಳಿಗಾಗಿ ಭಾರತ ಮತ್ತು ಫ್ರಾನ್ಸ್ ಜಂಟಿಯಾಗಿ ಪ್ರಮುಖ ಸೇನಾ ವೇದಿಕೆ ಸಿದ್ಧವಾಗುವುದನ್ನು ನೋಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.