ಕೋಝಿಕ್ಕೋಡ್: ಕೇರಳ ಪ್ರಸಿದ್ದ ಮಾರುಕಟ್ಟೆ ಕೋಝಿಕ್ಕೋಡ್ ನ ಮಿಠಾಯಿ ಬೀದಿಯಲ್ಲಿರುವ ವ್ಯಾಪಾರ ಸಂಸ್ಥೆಗಳನ್ನು ಕೇಂದ್ರೀಕರಿಸಿ ಜಿಎಸ್‍ಟಿ ಇಲಾಖೆ ನಡೆಸಿದ ತಪಾಸಣೆಯಲ್ಲಿ 27 ಕೋಟಿಯಷ್ಟು ತೆರಿಗೆ ವಂಚನೆ ನಡೆದಿರುವುದು ಪತ್ತೆಯಾಗಿದೆ.
ಕೋಝಿಕ್ಕೋಡ್ ಮೂಲದ ಅಶ್ರಫ್ ಅಲಿ, ಅಶ್ರಫ್ ಅಲಿ ಅವರ ಪತ್ನಿ ಮತ್ತು ಸ್ನೇಹಿತ ಶಬೀರ್ ಅವರ ಒಡೆತನದ ಸುಮಾರು 20 ಬಟ್ಟೆ ವ್ಯವಹಾರ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಯಿತು. ಅವರ ಮನೆಗಳಲ್ಲಿ ತೆರಿಗೆ ವಂಚನೆ ಮಾಡಿರುವ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೋಝಿಕ್ಕೋಡ್‍ನ ಮಿಠಾಯಿ ಸ್ಟ್ರೀಟ್‍ನಲ್ಲಿರುವ ಅಶ್ರಫ್ ಅಲಿ ಮಾಲೀಕತ್ವದ ಲೇಡೀಸ್ ವಲ್ರ್ಡ್ ಎಂಬ ವ್ಯಾಪಾರ ಸಂಸ್ಥೆಗೆ ನಿನ್ನೆ ತಪಾಸಣೆಗೆ ಬಂದ ಜಿಎಸ್‍ಟಿ ಇಲಾಖೆಯ ನೌಕರರನ್ನು ಬೀಗ ಹಾಕಿ ದಿಗ್ಬಂಧನಕ್ಕೊಳಪಡಿಸಲಾಯಿತು. ಬೇರೆ ರಾಜ್ಯಗಳಿಂದ ವಸ್ತುಗಳನ್ನು ಖರೀದಿಸಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಲಾಗಿತ್ತು. ಉದ್ಯಮಗಳ ಜಿಎಸ್‍ಟಿ ನೋಂದಣಿ ರದ್ದುಪಡಿಸಲು ಕ್ರಮಕೈಗೊಳ್ಳಲಾಗುವುದು ಮತ್ತು 27 ಕೋಟಿ ತೆರಿಗೆ ಪಾವತಿಸುವಂತೆ ಮಾಲೀಕರಿಗೆ ನೋಟಿಸ್ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.