ಕಾಸರಗೋಡು : ತಿರುವನಂತಪುರದಲ್ಲಿ ಮುಷ್ಕರ ಹೂಡಿದ್ದ ಸಂದರ್ಭ ನೀಡಿದ್ದ ಭರವಸೆಗಳಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ ತೆರೆಯುವುದನ್ನು ಹೊರತುಪಡಿಸಿ ಯಾವುದೂ ಅನುಷ್ಠಾನಗೊಳ್ಳದಿರುವುದನ್ನು ಪ್ರತಿಭಟಿಸಿ ಎಂಡೋಸಂತ್ರಸ್ತರನ್ನು ಒಟ್ಟುಸೇರಿಸಿ ಮತ್ತೆ ಹೋರಾಟಕ್ಕಿಳಿಯುವುದಾಗಿ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ದಯಾಬಾಯಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ನಿರ್ಲಕ್ಷ್ಯಕ್ಕೊಳಗಾಗಿರುವ ಕಾಸರಗೋಡು ಮೆಡಿಕಲ್ ಕಾಲೇಜಿನ ದುಸ್ಥಿತಿಯ ವಿರುದ್ಧ ಜುಲೈ 29ರಂದು ಕಾಲೇಜು ಆಸ್ಪತ್ರೆ ವಠಾರದಲ್ಲಿ ಉಪವಾಸ ಸತ್ಯಾಗ್ರಹ ಆಯೋಜಿಸಲಾಗುವುದು. ಭಾರಿ ಪ್ರಚಾರದೊಂದಿಗೆ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರಂಭಿಸಲಾದ ಹೊರ ರೋಗಿ ವಿಭಾಗದಲ್ಲಿ ಇಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಭಿಸುವ ಸೇವೆಯೂ ಲಭ್ಯವಾಗುತ್ತಿಲ್ಲ. ಸಾಮಾಜಿಕ ಬದ್ಧತೆಯನ್ವಯ ಟಾಟಾ ಸಂಸ್ಥೆ ಒದಗಿಸಿದ್ದ ಟಾಟಾ ಕೋವಿಡ್ ಆಸ್ಪತ್ರೆಯನ್ನು ಸ್ಪೆಷಾಲಿಟಿ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದ ಸರ್ಕಾರ ಇಂದು ಈ ಕಟ್ಟಡವನ್ನು ಒಡೆದು ತೆಗೆಯುತ್ತಿದೆ.
ತಿರುವನಂತಪುರದಲ್ಲಿ ಒಂಬತ್ತು ತಿಂಗಳ ಹಿಂದೆ ನಡೆಸಲಾದ ಮುಷ್ಕರವನ್ನು ಸರ್ಕಾರದ ಭರವಸೆಯಂತೆ ಕೊನೆಗೊಳಿಸಿದ್ದರೂ, ಇದುವರೆಗೆ ಎಂಡೋಸಲ್ಫಾನ್ ಸಂತ್ರಸ್ತರ ಪತ್ತೆಗೆ ಶಿಬಿರ ಆಯೋಜಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಹೋರಾಟ ಬಲಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೊಷ್ಠೀಯಲ್ಲಿ ಎಕೆ ಪ್ರಕಾಶ್, ಶ್ರೀನಾಥ್ ಶಶಿ, ರಾಜನ್ ವಿ ಬಾಳೂರ್ ಉಪಸ್ಥಿತರಿದ್ದರು.