ನವದೆಹಲಿ: ಭಾರತೀಯ ಆಹಾರ ನಿಗಮವು (ಎಫ್‌ಸಿಎ) 'ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ'ಯಡಿ ಬುಧವಾರ ನಡೆಸಿದ ಅಕ್ಕಿಯ ಇ-ಹರಾಜಿಗೆ ವ್ಯಾಪಾರಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಚಿಲ್ಲರೆ ಹಣದುಬ್ಬರ ನಿಯಂತ್ರಿಸಲು ಹಾಗೂ ದೇಶೀಯ ಪೂರೈಕೆಯನ್ನು ಸುಧಾರಿಸಲು ನಡೆಸಿದ ಮೂರನೇ ಸುತ್ತಿನ ಹರಾಜಿನಲ್ಲಿ 4.29 ಲಕ್ಷ ಟನ್ ಗೋಧಿ ಹಾಗೂ 3.95 ಲಕ್ಷ ಟನ್ ಅಕ್ಕಿ ಮಾರಲು ನಿಗಮ ಉದ್ದೇಶಿಸಿತ್ತು.
ಕರ್ನಾಟಕದ ಎಸ್‌ಎಲ್‌ಆರ್ ರೈಸ್ ಇಂಡಸ್ಟ್ರಿಯು ಕೆ.ಜಿ.ಗೆ ₹31ರಂತೆ 100 ಟನ್ ಅಕ್ಕಿ ಖರೀದಿಗೆ ಬಿಡ್ ಮಾಡಿದೆ. ಕೇರಳದ ಸನ್‌ರೈಸ್ ಟ್ರೇಡಿಂಗ್ ಕಂಪನಿ ಸಹ ಅದೇ ಬೆಲೆಗೆ 100 ಟನ್ ಅಕ್ಕಿ ಖರೀದಿಸಲು ಒಪ್ಪಿಗೆ ಸೂಚಿಸಿದೆ. ಮಹಾರಾಷ್ಟ್ರದ ಇಬ್ಬರು ವ್ಯಾಪಾರಿಗಳು 90 ಟನ್ ಅಕ್ಕಿಗೆ ಬಿಡ್ ಮಾಡಿದ್ದಾರೆ ಎಂದು ಆಹಾರ ಸಚಿವಾಲಯದ ಮೂಲಗಳು ತಿಳಿಸಿವೆ.
ಜುಲೈ 5ರಂದು ನಡೆಸಿದ ಇ-ಹರಾಜಿನಲ್ಲಿ 3.88 ಲಕ್ಷ ಟನ್ ಅಕ್ಕಿ ಮಾರಲು ಉದ್ದೇಶಿಸಲಾಗಿತ್ತು. ಆದರೆ, 170 ಟನ್ ಅಕ್ಕಿ ಖರೀದಿಗೆ ಮಾತ್ರ ವ್ಯಾಪಾರಿಗಳು ಬಿಡ್ ಮಾಡಿದ್ದರು. 'ಹಲವು ವರ್ಷಗಳ ಬಳಿಕ ಅಕ್ಕಿಯ ಇ-ಹರಾಜು ನಡೆಸಲಾಗಿದೆ. ಇದು ಆರಂಭವಷ್ಟೇ. ಪ್ರತಿ ವಾರ ಇ- ಹರಾಜು ನಡೆಸಲಾಗುತ್ತದೆ. ಒಂಬತ್ತು ತಿಂಗಳವರೆಗೆ ಈ ಪ್ರಕ್ರಿಯೆ ಮುಂದುವರಿಯಲಿದೆ' ಎಂದು ಆಹಾರ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದರು.
ಇ-ಹರಾಜಿನಲ್ಲಿ ಹೆಚ್ಚಿನ ವ್ಯಾಪಾರಿಗಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಭವಿಷ್ಯದಲ್ಲಿ ಅಗತ್ಯವಿದ್ದರೆ ಸರ್ಕಾರವು ನೀತಿಯಲ್ಲಿ ಬದಲಾವಣೆ ಮಾಡಲು ಸಿದ್ಧವಿದೆ ಎಂದೂ ಹೇಳಿದ್ದರು. ಆದರೆ, ಈ ಯೋಜನೆಯಲ್ಲಿ ರಾಜ್ಯ ಸರ್ಕಾರಗಳಿಗೆ ಭಾಗವಹಿಸಲು ಅವಕಾಶ ನೀಡಲು ಆಗದು ಎಂದೂ ಸ್ಪಷ್ಟಪಡಿಸಿದ್ದರು.
ಕರ್ನಾಟಕದಲ್ಲಿ ಅನ್ನ ಭಾಗ್ಯ ಯೋಜನೆಯ ಅನುಷ್ಠಾನಕ್ಕೆ ಪ್ರತಿ ತಿಂಗಳು 2.28 ಲಕ್ಷ ಟನ್ ಅಕ್ಕಿ ಪೂರೈಸುವಂತೆ ಕರ್ನಾಟಕ ಸರ್ಕಾರವು ನಿಗಮಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಪ್ರತಿ ಕೆ.ಜಿ.ಗೆ ₹34ರ ದರದಲ್ಲಿ ರಾಜ್ಯಕ್ಕೆ ಅಕ್ಕಿ ಒದಗಿಸಲು ನಿಗಮ ಒಪ್ಪಿತ್ತು. ಮರುದಿನವೇ ನಿಲುವು ಬದಲಿಸಿದ್ದ ನಿಗಮವು, ಅಕ್ಕಿ ನೀಡಲು ನಿರಾಕರಿಸಿತ್ತು.