ನವದೆಹಲಿ: ದಿ ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊದ (ಪಿಬಿಐ) ಫ್ಯಾಕ್ಟ್‌ಚೆಕ್ (ಸತ್ಯಾಂಶ ಪರಿಶೀಲನೆ) ಘಟಕವು 2020ರ ನವೆಂಬರ್‌ನಿಂದ ಇಲ್ಲಿಯವರೆಗೆ ಕ್ರಮ ತೆಗೆದುಕೊಳ್ಳಬಹುದಾದ 28,000 ಪ್ರಶ್ನೆಗಳನ್ನು ಸ್ವೀಕರಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್ ಅವರು ರಾಜ್ಯಸಭೆಗೆ ಈಚೆಗೆ ತಿಳಿಸಿದ್ದಾರೆ.
2021ರಲ್ಲಿ ಅತಿ ಹೆಚ್ಚು ಅಂದರೆ, ಕ್ರಮ ತೆಗೆದುಕೊಳ್ಳಬಹುದಾದ 15,412 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಆದರೆ, 2022ರಲ್ಲಿ ಪ್ರಶ್ನೆಗಳ ಸಂಖ್ಯೆ ಕಡಿಮೆಯಾಗಿದ್ದು, 8,107 ಪ್ರಶ್ನೆಗಳು ಬಂದಿವೆ. 2023ರ ಜೂನ್‌ವರೆಗೆ 1,472 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ ಎಂದು ಅನುರಾಗ್ ಅವರು ಲಿಖಿತ ಉತ್ತರ ನೀಡಿದ್ದಾರೆ.
ಸಿಪಿಐ ಸಂಸದ ಬಿನೋಯ್ ವಿಸ್ವಂ ಅವರು ಕೇಳಿದ ಲಿಖಿತ ಪ್ರಶ್ನೆಗೆ ಅನುರಾಗ್ ಹೀಗೆ ಉತ್ತರಿಸಿದ್ದಾರೆ.
2019ರ ನವೆಂಬರ್‌ನಲ್ಲಿ ಪಿಐಬಿ ಅಡಿ ಫ್ಯಾಕ್ಟ್‌ಚೆಕ್ ಘಟಕವನ್ನು ರಚಿಸಲಾಯಿತು. ಕೇಂದ್ರ ಸರ್ಕಾರವನ್ನು ಕುರಿತ ಸುಳ್ಳು ಸುದ್ದಿಗಳನ್ನು ಈ ಘಟಕ ಪರಿಶೀಲಿಸುತ್ತದೆ. ಹಲವು ಪ್ರಕರಣಗಳಲ್ಲಿ ಸ್ವಯಂ ಪ್ರೇರಿತವಾಗಿ ಸುಳ್ಳು ಸುದ್ದಿಗಳನ್ನು ಗಣನೆಗೆ ತೆಗೆದುಕೊಂಡರೆ, ಇನ್ನಷ್ಟು ಪ್ರಕರಣಗಳಲ್ಲಿ ಸಾರ್ವಜನಿಕರು ಕೇಳುವ ಪ್ರಶ್ನೆಗಳನ್ನು ಪರಿಗಣಿಸುತ್ತದೆ.