ನವದೆಹಲಿ: ನನ್ನ ಮೂರನೇ ಅವಧಿಯಲ್ಲಿ ಭಾರತ ಪ್ರಪಂಚದ ಮೂರು ಅತಿದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಹೆಸರು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ರೂಪದಲ್ಲಿ ಹೇಳಿದ್ದಾರೆ.
ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಜಾಗತಿಕ ವಸ್ತುಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.
ಬಿಜೆಪಿ ಸರ್ಕಾರದ ನನ್ನ ಮೂರನೇ ಅವಧಿಯಲ್ಲಿ ಭಾರತ ಖಂಡಿತವಾಗಿಯೂ ಜಾಗತಿಕ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಇದು ಮೋದಿ ಗ್ಯಾರಂಟಿ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.
2014 ರಿಂದ ಭಾರತೀಯರು ಅಭಿವೃದ್ದಿಗೆ ಸಾಕ್ಷಿಯಾಗಿದ್ದಾರೆ. ಆದರೆ, ಕೆಲವರಿಗೆ ಅಬಿವೃದ್ಧಿ ಹಾಗೂ ಉತ್ತಮ ಕೆಲಸಗಳನ್ನು ಕಂಡರೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ವಿರೋಧ ಪಕ್ಷಗಳನ್ನು ಗುರಿಯಾಗಿಸಿ ಮಾತನಾಡಿದ್ದಾರೆ.
ತಮ್ಮ ಸರ್ಕಾರದ ಅಭಿವೃದ್ಧಿಯ ಅಂಕಿ-ಸಂಖ್ಯೆಗಳನ್ನು ತೆರೆದಿಟ್ಟ ಅವರು, ಭಾರತ ಮುಂದಿನ 25 ವರ್ಷಗಳಲ್ಲಿ ಬಡತನ ಮುಕ್ತ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ ಎಂದು ಹೇಳಿದ್ದಾರೆ.
ಜಿಡಿಪಿ ಆಧಾರದಲ್ಲಿ ಐಎಂಎಫ್ ವರದಿ ಅನುಸಾರ ಭಾರತ ಸದ್ಯ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. 2024ರ ಮೇ ತಿಂಗಳಲ್ಲಿ ಮೋದಿ ಸರ್ಕಾರದ ಎರಡನೇ ಅವಧಿ ಕೊನೆಗೊಳ್ಳಲಿದೆ.
ಇನ್ನು ಭಾರತವು 2027ರ ವೇಳೆಗೆ ವಿಶ್ವದ ಮೂರನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯನ್ನು ಹೊಂದಲಿದೆ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಕೂಡ ಅಂದಾಜು ಮಾಡಿದ್ದಾರೆ.
'2014ರ ನಂತರದಲ್ಲಿ ಭಾರತವು ನಡೆದುಬಂದಿರುವ ಹಾದಿಯನ್ನು ಗಮನಿಸಿದರೆ, ದೇಶವು 2027ರಲ್ಲಿ ವಿಶ್ವದ ಮೂರನೆಯ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದುವ ಸಾಧ್ಯತೆ ಇದೆ ಎಂಬುದು ಗೊತ್ತಾಗುತ್ತದೆ' ಎಂದು ಎಸ್‌ಬಿಐ ವರದಿ ತಿಳಿಸಿದೆ.