ಕಾಸರಗೋಡು: ಜಿಲ್ಲಾದ್ಯಂತ ಮುಂಗಾರು ಚುರುಕು ಪಡೆದುಕೊಳ್ಳಲಾರಂಭಿಸಿದೆ. ಹವಾಮಾನ ಮುನ್ಸೂಚನೆಯನ್ವಯ ಕೇರಳಕ್ಕೆ ಜೂ. 4ಕ್ಕೆ ಮುಂಗಾರು ಪ್ರವೇಶಿಸಬೇಕಾಗಿದ್ದರೂ, ವಿಳಂಬವಾಗಿ ಜೂ. 10ಕ್ಕೆ ಮುಂಗಾರು ಮಳೆ ಆರಂಭಗೊಂಡಿತ್ತು. ನಂತರದ ದಿನಗಳಲ್ಲಿ ಸಾಮಾನ್ಯ ಮಳೆಯಗುತ್ತಾ ಬಂದಿದ್ದು, ಕಳೆದ ಒಂದೆರಡು ದಿವಸಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಹೊಳೆ, ತೊರೆಗಳಲ್ಲಿನ ದಾಸ್ತಾನುಗೊಂಡಿದ್ದ ತ್ಯಾಜ್ಯ ಕೊಚ್ಚಿಕೊಂಡು ಹೋಗುವ ರೀತಿಯಲ್ಲಿ ಮಳೆ ಬಿರುಸುಗೊಂಡಿರಲಿಲ್ಲ. ಶುಕ್ರವಾರದಿಂದ ಕಾಸರಗೋಡು ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ.
ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್:
ಜುಲೈ 3 ಮತ್ತು 4 ರಂದು ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಜುಲೈ 3 ಮತ್ತು 4 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜುಲೈ 2 ರಂದು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಹೊಳೆದಡ, ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನತೆ ಜಾಗ್ರತೆ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.