ಶ್ರೀನಗರ: ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶನಿವಾರ ಶಿಯಾ ಸಮುದಾಯದ ಮೊಹರಂ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಳೆದ 35 ವರ್ಷಗಳಲ್ಲಿ ರಾಜ್ಯದ ಮುಖ್ಯಸ್ಥರೊಬ್ಬರು ಮೊಹರಂ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುಬಜಾರ್‌ನಿಂದ ದಾಲ್ಗೇಟ್‌ಗೆ ಹಾದುಹೋಗುವ ಸಾಂಪ್ರದಾಯಿಕ ಮಾರ್ಗದಲ್ಲಿ ಮೊಹರಂನ 8ನೇ ದಿನದ ಮೆರವಣಿಗೆ ಸಾಗಲು ಆಡಳಿತ ಗುರುವಾರ ಅನುಮತಿ ನೀಡಿತ್ತು. ಕಪ್ಪು ಕುರ್ತಾ ಧರಿಸಿದ್ದ ಸಿನ್ಹಾ ನಗರದ ಒಳಭಾಗಗಳಾದ ಡೌನ್‌ಟೌನ್‌ನ ಝಾಡಿಬಲ್ ಪ್ರದೇಶದಲ್ಲಿನ ಬೋಟಾ ಕಡಲ್‌ನಲ್ಲಿ ಬಿಗಿ ಭದ್ರತೆಯೊಂದಿಗೆ ಮೊಹರಂ ಮೆರವಣಿಗೆಯಲ್ಲಿ ಸೇರಿಕೊಂಡರು. ಪೊಲೀಸ್ ಮತ್ತು ಹಿರಿಯ ಅಧಿಕಾರಿಗಳಿಗೆ ಅವರಿಗೆ ಸಾಥ್ ನೀಡಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡವರೊಂದಿಗೆ ಸಂವಾದ ನಡೆಸಿದ್ದು, ಉಪಹಾರ ವಿತರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊಹಂ ಮೆರಣಿಗೆಗೆ ಕಟ್ಟುನಿಟ್ಟಿನ ಭದ್ರತೆ ಮಾಡಲಾಗಿತ್ತು ಎಂದು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.