ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 2ರಿಂದ ಪ್ರಾರಂಭಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ಧರಿಸಿದೆ.
ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 2ರಿಂದ ಪ್ರಾರಂಭಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ಧರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠವು ಈ ನಿರ್ಧಾರ ಕೈಗೊಂಡಿದೆ.
ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ ನಿತ್ಯವೂ ಅರ್ಜಿಗಳ ವಿಚಾರಣೆ ನಡೆಯಲಿದೆ ಎಂದು ಪೀಠ ಹೇಳಿದೆ.
ಪ್ರಕರಣ ಸಂಬಂಧ ಅರ್ಜಿದಾರರ ಕಡೆಯಿಂದ ಮತ್ತು ಸರ್ಕಾರದ ಕಡೆಯಿಂದ ತಲಾ ಇಬ್ಬರು ವಕೀಲರನ್ನು ನೇಮಕ ಮಾಡಲಾಗಿದೆ. ಅರ್ಜಿಗಳ ವಿಚಾರಣೆ ಅನುಕೂಲವಾಗುವ ನಿಟ್ಟಿನಲ್ಲಿ ಇವರು ಕೆಲಸ ಮಾಡಲಿದ್ದಾರೆ. ಜುಲೈ 27ರೊಳಗೆ ಸಲ್ಲಿಕೆಯಾಗುವ ಲಿಖಿತ ಹೇಳಿಕೆ ಮತ್ತು ದಾಖಲೆಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು.