ಜಮ್ಮು,: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ಧತಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ದಿನಾಂಕ ನಿಗದಿಯಾಗಿದ್ದು, ಈ ನಡುವೆ ಸಂವಿಧಾನದ 370ನೇ ವಿಧಿ ವಿಷಯ ಹಳೆಯದ್ದು, ಅದಕ್ಕೆ ಮತ್ತೆ ಹಿಂದಿರುವುದಿಲ್ಲ ಎಂದು ಐಎಎಸ್ ಅಧಿಕಾರಿ ಶಾ ಫೈಸಲ್ ಹೇಳಿದ್ದಾರೆ.
'ಆರ್ಟಿಕಲ್ 370 ವಿಷಯವು ನನ್ನಂತಹ ಅನೇಕ ಕಾಶ್ಮೀರಿಗಳಿಗೆ ಭೂತಕಾಲದ ವಿಷಯವಾಗಿದೆ. ಜೀಲಂ ಮತ್ತು ಗಂಗಾ ನದಿಗಳು ಒಳ್ಳೆಯದಕ್ಕಾಗಿ ಹಿಂದೂ ಮಹಾಸಾಗರವನ್ನು ಸೇರುತ್ತವೆ. ಅವು ಮತ್ತೆ ಹಿಂದಿರುಗುವುದಿಲ್ಲ' ಎಂದು ಫೈಸಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಫೈಸಲ್ 2010ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಫೈಸಲ್ ಅವರನ್ನು ಬಂಧಿಸಲಾಗಿತ್ತು. ಬಳಿಕ, ಸರ್ಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದ ಫೈಸಲ್, 2019ರಲ್ಲಿ 'ಜಮ್ಮು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್'ಎಂಬ ರಾಜಕೀಯ ಪಕ್ಷ ಸ್ಥಾಪಿಸಿದ್ದರು.
ಆದರೆ, ಸರ್ಕಾರ ಅವರ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ವೈದ್ಯರೂ ಆಗಿರುವ ಫೈಸಲ್ ಅವರನ್ನು ನಂತರ ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ನಿಯೋಜಿಸಲಾಗಿತ್ತು.
2019ರಲ್ಲಿ370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಫೈಸಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 2022ರಲ್ಲಿ, ರಾಜೀನಾಮೆ ಹಿಂಪಡೆಯುವ ಫೈಸಲ್ ಮನವಿಯನ್ನು ಅರ್ಜಿಯನ್ನು ಸರ್ಕಾರ ಅಂಗೀಕರಿಸಿ ಸರ್ಕಾರಿ ಮರುನೇಮಕ ಮಾಡಿತ್ತು. ಅದೇ ತಿಂಗಳು, ಫೈಸಲ್ ಅವರು ಆರ್ಟಿಕಲ್ 370 ರದ್ದತಿಯನ್ನು ಪ್ರಶ್ನಿಸಿದ ಏಳು ಅರ್ಜಿದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಅಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಗೊಳಿಸಿದ ಸುಮಾರು ನಾಲ್ಕು ವರ್ಷಗಳ ನಂತರ, ಮುಖ್ಯ ನ್ಗಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ಈ ಕುರಿತ ಅರ್ಜಿಗಳ ವಿಚಾರಣೆಗೆ ಜುಲೈ 11ರಂದು ಸಮಯ ನಿಗದಿ ಮಾಡಿದೆ.