ಶ್ರೀಹರಿಕೋಟಾ : ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-3 ಶುಕ್ರವಾರ ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಿದೆ.
ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್ 3 'ಬಾಹುಬಲಿ ರಾಕೆಟ್' ಆಗಸದತ್ತ ಚಿಮ್ಮಿದೆ.
ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಉಪಗ್ರಹವನ್ನು ಚಂದ್ರನ ಮೇಲ್ಮೈಯಲ್ಲಿ ಸುಲಭವಾಗಿ ಇಳಿಸುವ 6 ವಾರಗಳ ಮಿಷನ್ ಗೆ ಅಧಿಕೃತ ಚಾಲನೆ ಸಿಕ್ಕಿದೆ.
ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ನ್ನು ಹೊಂದಿದ್ದು, ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವನ್ನು ಹೊಂದಿದೆ.
ಈ ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಮಾತ್ರವಲ್ಲದೇ ಈ ಬಾರಿ ಮುಂಬೈನ ಪೊವಾಯಿ ಮತ್ತು ಕೊಯಮತ್ತೂರಿನಲ್ಲಿರುವ ಲಾರ್ಸೆನ್ ಮತ್ತು ಟೂಬ್ರೊ ಕಾರ್ಖಾನೆಯ ಕೆಲಸಗಾರರೂ ಸಾಥ್ ನೀಡಿದ್ದಾರೆ.