ನವದೆಹಲಿ: ಜಾರಿ ನಿರ್ದೇಶನಾಲಯದ ಹಾಲಿ ನಿರ್ದೇಶಕರ ಅವಧಿಯನ್ನು 3 ನೇ ಬಾರಿಗೆ ವಿಸ್ತರಣೆ ಮಾಡಿರುವುದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಇ.ಡಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವಧಿಯನ್ನು ಜು.31 ಕ್ಕೆ ನಿಗದಿಪಡಿಸಿದೆ.
ನ್ಯಾ. ಬಿಆರ್ ಗವಾಯಿ, ನ್ಯಾ. ವಿಕ್ರಮ್ ನಾಥ್, ನ್ಯಾ. ಸಂಜಯ್ ಕರೋಲ್ ಅವರಿದ್ದ ಪೀಠ, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಈ ವರ್ಷ ಕೈಗೊಂಡ ಸ್ವತಂತ್ರ ಮೌಲ್ಯಮಾಪನ ಹಾಗೂ ಅಧಿಕಾರ ಹಸ್ತಾಂತರ ಸುಗಮಗೊಳಿಸುವ ದೃಷ್ಟಿಯಿಂದ ಮಿಶ್ರಾ ಅವರ ಅವಧಿಯನ್ನು ಜು.31 ವರೆಗೆ ನಿಗದಿಪಡಿಸಲಾಗಿದೆ.
ಸರ್ಕಾರದ ಅಧಿಸೂಚನೆಯ ಪ್ರಕಾರ 1984 ರ ಐಆರ್ ಎಸ್ ಅಧಿಕಾರಿಯಾಗಿರುವ ಮಿಶ್ರಾ ಅವರು 2023 ರ ನವೆಂಬರ್ 18 ರಂದು ನಿವೃತ್ತರಾಗಬೇಕಿತ್ತು. ಆದಾಗ್ಯೂ, ನಿರ್ದೇಶಕರ ಅಧಿಕಾರಾವಧಿಯನ್ನು ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ವಿಜಿಲೆನ್ಸ್ ಕಮಿಷನ್ ಕಾಯ್ದೆ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಯ ತಿದ್ದುಪಡಿಗಳನ್ನು ಪೀಠವು ದೃಢಪಡಿಸಿತು.
ಜಾರಿ ನಿರ್ದೇಶನಾಲಯದ ನಿರ್ದೇಶಕರ ಅವಧಿಯನ್ನು 3 ನೇ ಬಾರಿಗೆ ವಿಸ್ತರಣೆ ಮಾಡುತ್ತಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಎಫ್ಎ ಟಿಎಫ್ ಪರಿಶೀಲನೆ ದೃಷ್ಟಿಯಿಂದ ಅವಧಿ ವಿಸ್ತರಣೆಯನ್ನು ಸಮರ್ಥಿಸಿಕೊಳ್ಳಲಾಗಿತ್ತು.