ಲಖನೌ: ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-3 ಶುಕ್ರವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಮಹಿಳೆಯೊಬ್ಬರು ಈ ಮಿಷನ್ ನ ಸಾರಥ್ಯ ವಹಿಸಿದ್ದಾರೆ.
ಈ ಮಹತ್ವದ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿರುವ ಮಹಿಳಾ ವಿಜ್ಞಾನಿ, ರಾಕೆಟ್ ಮಹಿಳೆ ಎಂದೇ ಗುರುತಿಸಲಾದ ರಿತು ಕರಿದಾಲ್ ಶ್ರೀವಾಸ್ತವ ಅವರು ಲಖನೌ ಮೂಲದವರಾಗಿದ್ದು, ಸುಮಾರು 54 ಮಂದಿ ಮಹಿಳಾ ವಿಜ್ಞಾನಿಗಳು/ ಎಂಜಿನಿಯರ್‌ಗಳು ಈ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ.
ಶ್ರೀವಾಸ್ತವ ಅವರು ಇಸ್ರೋ ವಿಜ್ಞಾನಿಯಾಗಿದ್ದು, ಚಂದ್ರಯಾನ-3 ಮಿಷನ್‌ನ ನಿರ್ದೇಶಕಿಯಾಗಿದ್ದಾರೆ. ಅಲ್ಲದೆ ಮಂಗಳಯಾನದ ಉಪ ನಿರ್ದೇಶಕಿಯಾಗಿದ್ದು, ಮಂಗಳಯಾನದ ಮಾರ್ಸ್ ಆರ್ಬಿಟರ್ ಮಿಷನ್‌ನ ಕನಸು ರೂಪಿಸುವುದರಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ಶ್ರೀವಾಸ್ತವ ಅವರು ಈಗ ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದು, ಭೌತಶಾಸ್ತ್ರದಲ್ಲಿ ಲಖನೌ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಂತರ ಅವರು ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಅಧ್ಯಯನ ಮಾಡಿದ್ದು, ಏರೋಸ್ಪೇಸ್‌ನಲ್ಲಿ ಪರಿಣಿತಿ ಹೊಂದಿದ್ದಾರೆ.
ಶ್ರೀವಾಸ್ತವ ಅವರು ಚಿಕ್ಕ ವಯಸ್ಸಿನಿಂದಲೇ ಬಾಹ್ಯಾಕಾಶವನ್ನು ಅನ್ವೇಷಿಸುವ ಆಸಕ್ತಿ ಬೆಳೆಸಿಕೊಂಡರು. ಶಾಲಾ ದಿನಗಳಲ್ಲಿ ಇಸ್ರೋ ಅಥವಾ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಯಾವುದೇ ಬಾಹ್ಯಾಕಾಶ ಯೋಜನೆಗಳಿಗೆ ಸಂಬಂಧಿಸಿದ ಸುದ್ದಿ ಲೇಖನಗಳನ್ನು ಸಂಗ್ರಹಿಸುವುದು ಅವರ ಹವ್ಯಾಸಗಳಲ್ಲಿ ಒಂದಾಗಿತ್ತು.