ನವದೆಹಲಿ: ಉತ್ತರ ಭಾರತದ ಹಲವೆಡೆ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಭೂಕುಸಿತ, ಇನ್ನಿತರ ಮಳೆ ಸಂಬಂಧಿತ ಅವಘಡಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ.
ದೆಹಲಿಯ ಯಮುನಾ ನದಿ, ಹಿಮಾಲಪ್ರದೇಶದ ಬಿಯಾಸ್ ನದಿಗಳು ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ದಿಢೀರ್ ಪ್ರವಾಹದ ಹೊಡೆತಕ್ಕೆ ಸಿಲುಕಿ ಹಲವರು ಸಾವಿಗೀಡಾಗಿದ್ದಾರೆ.
ದೆಹಲಿ, ಗುರುಗ್ರಾಮ ಸೇರಿದಂತೆ ಹಲವು ನಗರ, ಪಟ್ಟಣಗಳಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಉತ್ತರಾಖಂಡದ ಹಲವೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಂಡುಬಂದಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ.
ಟ್ರಾಫಿಕ್ ಸಮಸ್ಯೆ, ನೀರು ತುಂಬಿದ ಅಂಡರ್‌ಪಾಸ್‌ಗಳು, ರಸ್ತೆಗಳ ದುರವಸ್ಥೆ ಕುರಿತಂತೆ, ವಿಡಿಯೊ ಮತ್ತು ಚಿತ್ರಗಳನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ರೈಲು ಸೇವೆಗೂ ಮಳೆ ಅಡ್ಡಿಯಾಗಿದೆ. 17 ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, 12 ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರ, ಲಡಾಕ್, ಹಿಮಾಚಲಪ್ರದೇಶದ ಕೆಲವೆಡೆ ಅಧಿಕ ಮಳೆಯಾಗುವ ಎಚ್ಚರಿಕೆ ನೀಡಲಾಗಿದ್ದು, ದೆಹಲಿಯಲ್ಲಿ 1982ರ ನಂತರ ಒಂದೇ ದಿನದಲ್ಲಿ ದಾಖಲೆಯ ಮಳೆಯಾಗಿದೆ. ಯಮುನಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.
ದೆಹಲಿಯಲ್ಲಿ ಭಾನುವಾರ ಬೆಳಿಗ್ಗೆ 8.30ರವರೆಗೆ 24 ಗಂಟೆಗಳಲ್ಲಿ 153 ಮಿ.ಮೀ ಮಳೆ ಆಗಿದೆ.
ರೆಡ್ ಅಲರ್ಟ್ ನೀಡಲಾಗಿರುವ ಹಿಮಾಚಲ ಪ್ರದೇಶದ 7 ಜಿಲ್ಲೆಗಳ ಪೈಕಿ ಸಂಭವಿಸಿದ 3 ಅವಘಡಗಳಲ್ಲಿ 5 ಮಂದಿ ಮೃತಪಟ್ಟಿದ್ದಾರೆ.
ಶಿಮ್ಲಾ ಜಿಲ್ಲೆಯ ಕೊಟ್‌ಘಡ್ ಪ್ರದೇಶದಲ್ಲಿ ಮನೆ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ಕಳೆದ 36 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ 14 ಭೂಕುಸಿತಗಳು ಮತ್ತು 13 ಹಠಾತ್ ಪ್ರವಾಹ ವರದಿಯಾಗಿವೆ. 700 ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ತುರ್ತು ಕಾರ್ಯಾಚರಣೆಯ ಕೇಂದ್ರವು ತಿಳಿಸಿದೆ.
ಉತ್ತರಾಖಂಡದಲ್ಲಿ ಕಾರು ಗಂಗಾ ನದಿಗೆ ಉರುಳಿದ ಪರಿಣಾಮ ಮೂವರು ಯಾತ್ರಾರ್ಥಿಗಳು ಅಸುನೀಗಿದ್ದಾರೆ. ರಿಷಿಕೇಶ್-ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ.
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬಸ್ ಮೇಲೆ ಮಣ್ಣು ಕುಸಿದು ಇಬ್ಬರು ಸಾವಿಗೀಡಾಗಿದ್ದಾರೆ. ಡೊಗ್ರಾ ನಲ್ಲಹ್ ಬಳಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಇಬ್ಬರು ಯೋಧರ ಮೃತದೇಹ ಪೂಂಚ್ ಜಿಲ್ಲೆಯಲ್ಲಿ ಪತ್ತೆಯಾಗಿವೆ.
ಜಮ್ಮು ಮತ್ತು ಕಾಶ್ಮೀರದ ಎತ್ತರದ ಪ್ರದೇಶಗಳು ಹಾಗೂ ಲಡಾಕ್‌ನ ಕೆಲವೆಡೆ ಹಿಮಪಾತದ ವರದಿಗಳೂ ಬಂದಿವೆ.
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಅಂಗಡಿಗಳು ಕೊಚ್ಚಿಹೋಗಿವೆ. ಕುಲು, ಕಿನ್ನೌರ್ ಮತ್ತು ಚಂಬಾದಲ್ಲಿನ ನುಲ್ಲಾಹ್‌ನಲ್ಲಿ ಹಠಾತ್ ಪ್ರವಾಹದಲ್ಲಿ ವಾಹನಗಳು ಕೊಚ್ಚಿಹೋಗಿವೆ.
ಪಂಜಾಬ್ ಮತ್ತು ಹರಿಯಾಣದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾವೃತ ಮತ್ತು ತಗ್ಗು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ.