ಮುಂಬೈ: ದೇಶದಲ್ಲಿ ಕೆಟ್ಟ ವಿಷಯಗಳ ಬಗ್ಗೆ ಮಾತನಾಡುವುದಕ್ಕಿಂತ ಈಗ ಒಳ್ಳೆಯ ವಿಷಯಗಳ ಬಗೆಗಿನ ಚರ್ಚೆಯು ಕನಿಷ್ಠ 40 ಪಟ್ಟು ಹೆಚ್ಚಾಗಿದೆ ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದರು.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ಉತ್ತರ ಮುಂಬೈನ ಕಾಂದಿವಲಿ ಉಪನಗರದಲ್ಲಿ ಶ್ರೀಮತಿ ಧಾಂಕುವರ್ಬೆನ್ ಬಾಬುಭಾಯಿ ಧಾಕನ್ ಆಸ್ಪತ್ರೆ (ಸುವರ್ಣ ಆಸ್ಪತ್ರೆ) ಉದ್ಘಾಟಿಸಿ ಅವರು ಮಾತನಾಡಿದರು.
'ಅನೇಕ ಬಾರಿ ನಕಾರಾತ್ಮಕ ಚರ್ಚೆಗಳು ಕೇಳಿಬರುತ್ತವೆ. ಆದರೆ, ನಾವು ದೇಶದಾದ್ಯಂತ ಹೋಗಿ ನೋಡಿದಾಗ, ಭಾರತದಲ್ಲಿ ಈಗ ನಡೆಯುತ್ತಿರುವ ಕೆಟ್ಟ ವಿಷಯಗಳ ಬಗ್ಗೆ ಮಾತನಾಡುವುದಕ್ಕಿಂತ 40 ಪಟ್ಟು ಹೆಚ್ಚು ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿದೆ ಎಂಬುದು ನಮಗೆ ತಿಳಿಯುತ್ತದೆ' ಎಂದು ಭಾಗವತ್ ಹೇಳಿದರು.
ಇಂದು ದೇಶದಲ್ಲಿ ಈ ಉತ್ಕರ್ಷಕ್ಕೆ (ಹೆಚ್ಚಳ) ಕಾರಣವಾಗಿದ್ದು ಸರ್ಕಾರದ ನೀತಿಗಳು ಮತ್ತು ಸರ್ಕಾರದ ಜವಾಬ್ದಾರಿಯುತ ಜನರು ಮಾಡುತ್ತಿರುವ ಕೆಲಸ. ಕೆಲವರು ಏನನ್ನೂ ಮಾಡದ ಕಾರಣದಿಂದಲೇ ಕೆಲಸಗಳೂ ಸುಗಮವಾಗಿ ನಡೆಯುತ್ತಿವೆ. ಒಂದು ವೇಳೆ ಅವರು ಕೆಲಸ ಮಾಡಿದರೆ ಸಮಸ್ಯೆಗಳು ಎದುರಾಗುತ್ತವೆ ಎಂದರು.
ಭಾರತವು ಕೀರ್ತಿ ಪಡೆಯುವುದನ್ನು ನೋಡುವ ಜನರ ಬಯಕೆ 40 ವರ್ಷಗಳ ಹಿಂದಿಗಿಂತ ಇಂದು ಹೆಚ್ಚು ಪ್ರಬಲವಾಗಿದೆ. ಇದು ಇನ್ನಷ್ಟು ಹೆಚ್ಚಾಗಬೇಕು. ನಾವು ಏರುತ್ತಿದ್ದೇವೆ. ಆದರೆ, ನಾವು ಇನ್ನೂ ಶಕ್ತಿಶಾಲಿಯಾಗಿಲ್ಲ. ನಮ್ಮ ಬೆಳವಣಿಗೆಯನ್ನು ನೋಡಲು ಬಯಸದ ಜನರೂ ನಮ್ಮ ನಡುವೆ ಇದ್ದಾರೆ ಎಂದು ಹೇಳಿದ್ದಾರೆ.
'ಇದು ಕೇವಲ ಅನ್ನ, ಬಟ್ಟೆ ಮತ್ತು ಮನೆ ಮಾತ್ರವಲ್ಲ. ಶಿಕ್ಷಣ ಮತ್ತು ಆರೋಗ್ಯವೂ ಕೂಡ ಇಂದಿನ ಸಮಾಜದಲ್ಲಿ ಅತ್ಯಗತ್ಯವಾಗಿದೆ. ಒಳ್ಳೆಯದು ಅಥವಾ ಕೆಟ್ಟದ್ದನ್ನು ನಿರ್ಧರಿಸುವ ಮಾನದಂಡ ಯಾವುದು? ಕಣ್ಣಿಗೆ ಕಾಣುವುದು ಒಂದಾದರೆ, ನಿಜವಾಗಿ ಸಂಭವಿಸಿರುವುದು ಬೇರೆಯದ್ದೇ ಆಗಿರುತ್ತದೆ. ಕೆಲಸ ಮಾಡದಿದ್ದರೂ ಮಾಡಿರುವಂತೆ ಕಾಣಿಸುವ ಹಾಗೆ ಮಾಡಬಹುದು' ಎಂದರು.