ನವದೆಹಲಿ: ದೇಶದಾದ್ಯಂತ ಅಂದಾಜು ಶೇ 44ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ.
ರಾಷ್ಟ್ರವ್ಯಾಪಿ ವಿಧಾನಸಭೆಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಸಕರಾಗಿರುವವರು ಚುನಾವಣೆಗೂ ಮುನ್ನ ಸಲ್ಲಿಸಿರುವ ಪ್ರಮಾಣ ಪತ್ರಗಳನ್ನು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‌ಇಡಬ್ಲ್ಯು) ಜೊತೆ ಸೇರಿ ವಿಶ್ಲೇಷಣೆ ನಡೆಸಿ ಈ ಮಾಹಿತಿ ನೀಡಿರುವುದಾಗಿ ಎಡಿಆರ್ ತಿಳಿಸಿದೆ.
28 ವಿಧಾನಸಭೆಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 4,033 ಶಾಸಕರ ಪೈಕಿ 4,001 ಶಾಸಕರನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದೂ ಹೇಳಿದೆ.
ವಿಶ್ಲೇಷಣೆಗೆ ಒಳಪಡಿಸಿರುವ ಶಾಸಕರಲ್ಲಿ 1,136 (ಶೇ 28ರಷ್ಟು) ಮಂದಿ ತಮ್ಮ ವಿರುದ್ಧ ಕೊಲೆ, ಕೊಲೆ ಯತ್ನ, ಮಹಿಳೆಯರ ವಿರುದ್ಧ ಎಸಗಲಾದ ಅಪರಾಧ ಕೃತ್ಯ, ಅಪಹರಣ ಸೇರಿದಂತೆ ಗಂಭೀರ ಸ್ವರೂಪದ ಕ್ರಿಮಿನಲ್ ಮೊಕದ್ದಮೆಗಳಿರುವುದಾಗಿ ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ಹೇಳಿದೆ.
ಕ್ರಿಮಿನಲ್ ದಾಖಲೆಗಳ ಹೊರತಾಗಿ, ಶಾಸಕರ ಆಸ್ತಿಯ ಕುರಿತೂ ಎಡಿಆರ್ ವಿಶ್ಲೇಷಣೆ ನಡೆಸಿದೆ.
4,001 ಶಾಸಕರ ಪೈಕಿ 88 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ. ಇವರ ಆಸ್ತಿ ₹100 ಕೋಟಿಗೂ ಹೆಚ್ಚಿದೆ ಎಂದೂ ವಿವರಿಸಿದೆ.
ಶಾಸಕರ ಸರಾಸರಿ ಆಸ್ತಿ ₹13.63 ಕೋಟಿಯಾದರೆ, ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಶಾಸಕರ ಆಸ್ತಿ ಸರಾಸರಿ ₹16.36 ಕೋಟಿಗೂ ಹೆಚ್ಚಾಗಿದೆ ಎಂದಿದೆ.
ಕರ್ನಾಟಕದ 223 ಶಾಸಕರನ್ನು ವಿಶ್ಲೇಷಣೆಗೆ ಒಳಪಡಿಸಿದ್ದು, ಇವರ ಸರಾಸರಿ ಆಸ್ತಿ ಮೌಲ್ಯ ₹64.39 ಕೋಟಿ ಇದೆ. ಇವರಲ್ಲಿ 32 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ ಮತ್ತು ರಾಜ್ಯವು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದಿದೆ.