ಪ್ಯಾರಿಸ್: ಫ್ರಾನ್ಸ್ ಪ‍್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಫ್ರಾನ್ಸ್ ಜೊತೆ 40 ವರ್ಷಗಳ ನಂಟು ಹೊಂದಿರುವುದಾಗಿ ಹೇಳಿದ್ದಾರೆ.
ಗುರುವಾರ ಪ್ಯಾರಿಸ್ ತಲುಪಿದ ಮೋದಿ ಅವರನ್ನು ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೋರ್ನ್ ಅವರು ಸಾಂಪ್ರಾದಾಯಿಕ ಸ್ವಾಗತ ನೀಡಿ ಬರಮಾಡಿಕೊಂಡರು.
ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, 'ಫ್ರಾನ್ಸ್ ಜೊತೆಗಿನ ನನ್ನ ಬಾಂಧವ್ಯ ತುಂಬಾ ಹಳೆಯದು. ಅದನ್ನು ನಾನು ಮರೆಯಲಾರೆ. ಸುಮಾರು 40 ವರ್ಷಗಳ ಹಿಂದೆ ಅಹಮದಾಬಾದ್‌ನಲ್ಲಿ ಕಾರ್ಯಾರಂಭ ಮಾಡಿದ ಫ್ರಾನ್ಸ್ ಸಾಂಸ್ಕೃತಿಕ ಕೇಂದ್ರದ ಮೊದಲ ಸದಸ್ಯ ನಾನು' ಎಂದು ಹೇಳಿಕೊಂಡಿದ್ದಾರೆ.
ಆ ಕೇಂದ್ರವು ಹಳೇ ದಾಖಲೆಗಳಲ್ಲಿದ್ದ ನನ್ನ ಗುರುತು ಪತ್ರವನ್ನು ಇತ್ತೀಚೆಗೆ ಪತ್ತೆ ಮಾಡಿ ನನಗೆ ಕಳುಹಿಸಿತ್ತು. ಆ ಉಡುಗೊರೆ ಬೆಲೆ ಕಟ್ಟಲಾಗದ್ದು ಎಂದಿದ್ದಾರೆ.
ಮುಂದುವರಿದು, 'ನಾನು ಸಾಕಷ್ಟು ಬಾರಿ ಫ್ರಾನ್ಸ್‌ಗೆ ಬಂದಿದ್ದೇನೆ. ಆದರೆ, ಈ ಬಾರಿಯ ಭೇಟಿ ತುಂಬಾ ವಿಶೇಷವಾದದ್ದು. ನಾಳೆ ಫ್ರಾನ್ಸ್ ರಾಷ್ಟ್ರೀಯ ದಿನ. ಫ್ರಾನ್ಸ್ ಜನರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ನನ್ನ ಆಹ್ವಾನಿಸಿದವರಿಗೆ ಧನ್ಯವಾದ ಹೇಳುತ್ತೇನೆ. ಇಂದು ಫ್ರಾನ್ಸ್ ಪ್ರಧಾನಿ ಅವರು ನನ್ನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ನಾಳೆ ನನ್ನ ಸ್ನೇಹಿತ (ಫ್ರಾನ್ಸ್ ಅಧ್ಯಕ್ಷ) ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ರಾಷ್ಟ್ರೀಯ ದಿನದ ಪಥಸಂಚಲದಲ್ಲಿ ಭಾಗವಹಿಸುತ್ತೇನೆ. ಇದು ಭಾರತ ಮತ್ತು ಫ್ರಾನ್ಸ್ ನಡುವಣ ಮುರಿಯಲಾಗದ ಸ್ನೇಹದ ಪ್ರತಿರೂಪವಾಗಿದೆ' ಎಂದು ತಿಳಿಸಿದ್ದಾರೆ.